ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 26 September, 2009

ಕಾಯೇ ಸರಸ್ವತಿ

ಕಾಯೇ ನಮ್ಮನು ಸರಸ್ವತಿ
ಕತ್ತಲ ಹರಿಸಿ ಕೊಡು ನೀ ಸನ್ಮತಿ ||ಪ||

ಹಂಸ ವಾಹಿನಿ, ಸರಸಿಜ ಮೋಹಿನಿ
ಮನಸಿಜನಗ್ರಜನರಸೀ |
ಅಕ್ಷರ ಜನನಿ, ಜ್ಞಾನಪ್ರದಾಯಿನಿ
ಮಂದಹಾಸಿ ಮೃದುಭಾಷೀ ||ಚರಣ-೧||

ಶ್ವೇತವಸನೇ ಶುಕ್ಲಾಭರಣೇ
ಚಂದ್ರ ಕಾಂತಿ ಪ್ರಭಾಸೇ |
ವೀಣಾ ಸ್ಫಟಿಕಮಣಿ ಪುಸ್ತಕ ಪಾಣೀ
ಕಾವ್ಯಗಾಯನ ಪ್ರೀತೇ ||ಚರಣ-೨||

ಹರಸೇ ತಾಯೇ, ಅಂಬುಜಾಸನೇ
ಅಂಬುಜದಳ ನೇತ್ರೇ |
ಸಲಹೇ ತಾಯೇ, ಮಂಗಳದಾಯಿನೀ
ಅಜಪ್ರಿಯೇ ಶುಭ ಗಾತ್ರೇ ||ಚರಣ-೩||
(೫-ಸೆಪ್ಟೆಂಬರ್-೨೦೦೫ - ೪-ಜೂನ್-೨೦೦೮)

Friday 18 September, 2009

ಕೂಸು ಮನ

ಅರುಣ ರವಿ ರಾಗಕ್ಕೆ ಹೊಳೆದು ನರ್ತಿಸುತಿದ್ದ
ಹುಲ್ಲಂಚ ಮಿಂಚನ್ನು ತೊರೆದೆವೇಕೆ?
ಪುಟಿ-ಪುಟಿದು ಏಳುತ್ತ ಆಗಸಕೆ ಹಾರುತ್ತ
ಅರಳಿ ಬೆಳೆಯುವ ಚಿಗುರ ಮರೆತೆವೇಕೆ?

ಹಾಲುಗಲ್ಲದ ಮೇಲೆ ಇಟ್ಟ ಬೆಟ್ಟನು ಸರಿಸಿ
ದಿಟ್ಟಿ ಸೋಕದ ಬೊಟ್ಟನಿಟ್ಟೆವೇಕೆ?
ಕೌತುಕವ ಸೋಜಿಗವ ಕಣ್ಣಂಚಿನಲೆ ಸವರಿ
ತುರಗ ಪಟ್ಟಿಯನಡ್ಡ ಕೊಟ್ಟೆವೇಕೆ?

ಬಿಂಬವಿಲ್ಲದ ಗುಡಿಗೆ ಮೂರ್ತತೆಯ ಸ್ವಾಗತಿಸಿ
ಅಷ್ಟಬಂಧಗಳಿಂದ ಬಿಗಿದೆವೇಕೆ?
ಸ್ತಂಭಗಳ ಅರಮನೆಯ ತುಂಬ ತುಂಬಿದೆ ಸರಕು
ಬಹಿರಂತರಂಗದಲಿ ಕೋಟೆಯೇಕೆ?

ಅನುದಿನವು ಸುಪ್ರಭೆಯ ಹೀರುವೆಲೆ ಹಸುರಂತೆ
ಕೂಸು-ಮನವಿರಲೆಮಗೆ ಮುಪ್ಪದೇಕೆ?
(೨೪-ಆಗಸ್ಟ್-೨೦೦೪)

Saturday 12 September, 2009

ವಿಲಾಪ

ರಾಧೆ ರಾಧೇ ಎನದೆ ಅರೆಘಳಿಗೆಯೂ ಇರದೆ
ರಮಿಸಿ ಕಾಡಿದ ನನಗೆ ಏನಾಯಿತೋ
ರಾಧೆಯಾ ನೆರಳಿರದೆ ಗೆಜ್ಜೆಯಾ ದನಿಯಿರದೆ
ರಂಗಿನಾಟದ ಹುರುಪು ಹಾಳಾಯಿತೋ

ಕಿರಿಯನೆಂದೆಲ್ಲರೂ ಹಿರಿತನವನಾಡುತ್ತ
ಕೀಟಲೆಯನಾಡ್ಯಾಡಿ ಕೆಣಕುತಿರಲು
ಕಿನ್ನರಿಯ ಲೀಲೆಯಲಿ ಪ್ರೀತಿಯಲಿ ಕಾಯುತ್ತ
ಕಿಂಕಿಣಿಯನಾಡಿ ನೀ ಮನವ ಗೆಲಲು

ಹಾಲುಮೊಸರನು ಮೆಚ್ಚಿ ಬೆಣ್ಣೆಬೆಟ್ಟವನೆತ್ತಿ
ಹಸುಮಂದೆಯಲಿ ಕರುಗಳೊಡನಾಡುತ
ಹಾಲಾಹಲವ ಸುರಿವ ಹಾವ ಹೆಡೆಯನು ಮೆಟ್ಟಿ
ಹಾಡಿ ಆಡಿದ ನನ್ನ ಜೀವ ಗೆಣತಿ

ಮಾವ ಕರೆದನು ಎಂದು ಮನೆಯ ತೊರೆದೆನು ಅಂದು
ಮರೆಯುವೆನು ಹೇಗೆ ನಾ ಮನದಂಗಳ
ಮಾಳಿಗೆಯಲೇ ನಿಂದು ಪರದೆ ಹಿಂದೆಯೆ ನೊಂದು
ಮಾತು ಮರೆಸಿದೆ, ತುಳುಕಿಸದೆ ಕಂಗೊಳ

ಒಮ್ಮೆಯಾದರು ಬಂದು ನಿನ್ನ ಕಾಂಬೆನು ಎಂದು
ಒಂದಾಸೆ ಹೊತ್ತಿದ್ದೆ ಅರಮನೆಯಲಿ
ಒರಗುದಿಂಬಿನ ಪೀಠ ನನಗೆ ಅಂಟಿದೆಯೆಂದು
ಒಣನೆಪವು ಎಳೆಯಿತದು ಬಿಡು ಭರದಲಿ

ಪಂಚಬಾಣನ ಮಿತ್ರ ಯುದ್ಧಸಾರುವ ಹೊತ್ತು
ಪೂರ್ಣ ಚಂದಿರನೊಳಗೆ ಕೋಲಾಹಲ
ಪಚ್ಚೆಪಸರಿದ ಬಯಲು ಎದೆಗೆ ಬಾಣವನಿತ್ತು
ಪ್ರಾಣ ಬೇಡಲು ನೆನಪು ದಾವಾನಲ

ರಾಜಕಾರಣ ಬೇಡ ರಾಜ್ಯಭಾರವು ಬೇಡ
ರಾಧೆ, ನಿನ್ನಯ ಪ್ರೇಮವೊಂದು ಸಿಗಲಿ
ರಾಶಿ ಹೊನ್ನೂ ಬೇಡ ರಾಯತನವೂ ಬೇಡ
ರಾಧೆ, ಯಮುನೆಯ ತಟವು ನಮಗೆ ಇರಲಿ
(೧೬-ಎಪ್ರಿಲ್-೨೦೦೯)

Friday 4 September, 2009

ನನ್ನ ಮನೆಯಲ್ಲಿ...

ನನ್ನ ಮನೆಯಲ್ಲೇ ನಾನು ಪರಕೀಯ;
ಅಪ್ಪನ ಮಾತಿಗೆ ಎದುರಾಡದೆ-
ಅಣ್ಣ-ತಮ್ಮರ ದನಿಗೆ ದನಿಗೊಡದೆ-
ಹೊಸಿಲ ಹೊರಗುರುಳಿ, ಮರಳಿ-
ಬಂದು ಹೋಗುತಿಹ ನೆಂಟ.

ನನ್ನ ಮನೆಯಲ್ಲೇ ನಾನು ಬಲುಸ್ವಾರ್ಥಿ;
ಬೆಳಕಿರದ ಸೂರಿಗೆ ದೀಪ ತೂಗಿಸಿ-
ಬೆಡಗಿರದ ಗೋಡೆಗೆ ಬಣ್ಣ ಅಂಟಿಸಿ-
ಅಂಗಳ ಬೆಳೆಯಿಸಿ, ಅರಳಿಸಿ-
ಅಂದ ತೋರಿಸಿದ ಬಂಟ.

ನನ್ನ ಮನೆಯಲ್ಲೇ ನಾನು ಕಡುದೋಷಿ;
ಸರಿದಾರಿ ತೋರಿ ಒಂದಿಷ್ಟು ಗದರಿ-
ಸಂಯಮದ ಪಾಠ ಮತ್ತಷ್ಟು ಒದರಿ-
ಕಿರಿಯರ ಕೈ ಹಿಡಿದು ನಡೆದು-
ಮುಂದೆ ಸಾಗಿಸಿದ ಕುಂಟ.

ನನ್ನ ಮನೆಯಲ್ಲೇ ನಾನು ಹುಚ್ಚಾತ್ಮ;
ಉಂಡೆಯಾ, ಉಟ್ಟೆಯಾ, ಅನ್ನದವರೊಳಗೆ-
ಉಸಿರಿನ ಕೋಟೆಯ ಪಿಸುದನಿಗಳೊಳಗೆ-
ಕಟಕಿಯನು ಕಂಡೂ ಕಾಣದ-
ನಗೆ-ಕಾಯಕದ ಒಂಟಿ.

(ಹುಟ್ಟಿ-ಬೆಳೆದ ಮನೆಗಾಗಿ ಸ್ವಂತ ಸಂಸಾರವನ್ನೂ ಕಡೆಗಣಿಸಿ, ತನ್ನದೆಲ್ಲವನ್ನೂ ಧಾರೆಯೆರೆದು, ಬಾಳು ಸಾಗಿಸುವ ‘ಪರಕೀಯ ಆತ್ಮ’ರಿಗಾಗಿ....)
(೨೫-ಫ಼ೆಬ್ರವರಿ-೨೦೦೪)