ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 26 February, 2010

ಹಿಮದ ಹೂವು (ಸ್ನೋ ಫ್ಲೇಕ್)

ಹಾಗೇ ತೆಳುವಾಗಿ ಹಗುರಾಗಿ ಸುಳಿದಾಡಿ ಇಳಿದದ್ದು
ನಿನ್ನ ಹೆಸರಿನ ಒಂದು ತುಣುಕಂತೆ, ಹೌದೆ?
ಸಣ್ಣನೆ ಗುನುಗಾಗಿ ಹಿತವಾಗಿ ಧಾರೆಯಲಿ ಬೆಳೆದದ್ದು
ನಿನ್ನ ಉಸಿರಿನ ಪಲುಕು ಮೆಲುಕಂತೆ, ಹೌದೆ?

ಅಲ್ಲಿಯೆ ಸುರಿದದ್ದು ಹರಿದದ್ದು ನೆರೆದದ್ದು ಮೊರೆದದ್ದು
ನಿನ್ನ ನೆನಪಿನ ರಸದ ಸುಮವಂತೆ, ಹೌದೆ?
ಮೆಲ್ಲನೆ ಉಸುರಿದ್ದು ಕೊಸರಿದ್ದು ಬೆಸೆದದ್ದು ಹೊಸೆದದ್ದು
ನಿನ್ನ ಇರವಿನ ಕ್ಷಣದ ಮರುಳಂತೆ, ಹೌದೆ?

ಅಂಚಿಗೆ ಬಂದಾಗ ಹನಿಯಾಗಿ ಮಣಿಯಾಗಿ ಹೊಳೆದದ್ದು
ನಿನ್ನ ಕಂಗಳ ಜೋಡು ಬೆಳಕಂತೆ, ಹೌದೆ?
ಬಾಗಿಲಲಿ ನಿಂದಾಗ ರಂಗಾಗಿ ಗುಂಗಾಗಿ ಸೆಳೆದದ್ದು
ನಿನ್ನ ನಗುವಿನ ಮಾಟ ಕುಲುಕಂತೆ, ಹೌದೆ?

ಬಾನಿಗೆ ಮೊಗವಿಟ್ಟು ಕಿವಿಯಿಟ್ಟು ಎದೆಯಿಟ್ಟು ಕರೆದದ್ದು
ನಿನ್ನ ಕಾಣುವ ಅನಿತು ಅಳಲಂತೆ, ಹೌದೆ?
ಕಿನ್ನರಿ ನಿನಗಾಗಿ ದನಿಯಾಗಿ ಮನವಾಗಿ ಒಲಿದದ್ದು
ನಿನ್ನ ಬೆರೆಯುವ ಸ್ನಿಗ್ಧ ಸುಖಕಂತೆ, ಹೌದೆ?

(೧೩-ಫೆಬ್ರವರಿ-೨೦೦೯)

Tuesday 16 February, 2010

ಪಯಣ

ನೆತ್ತಿಗೆ ಮುತ್ತಿತ್ತವರ ಅತ್ತ ಕಳಿಸಿ ಬಂದಾಗ
ಮನೆಯೆಲ್ಲ ಭಣಭಣ ಮನವೆಲ್ಲ ಒಣಒಣ
ಭಾವಗಳ ಒಸರು ಮತ್ತೆ ಪಸೆಯಾಗಿ ಹನಿದು
ಧಾರೆಯಾಗಲು ಬೇಕು ಕ್ಷಣ-ಕ್ಷಣ ದಿನ-ದಿನ

ಕಾಲವೇನು ಸಾಗುತ್ತದೆ ಯಾರ ಹಂಗಿಲ್ಲದೆ
ಮುಳ್ಳುಗಳ ಗುಂಗಿಲ್ಲದೆ ನಲಿವುಗಳ ರಂಗಿಲ್ಲದೆ
ನಮ್ಮ ಬಾಳು ನಮ್ಮದು ಒಲವ ಪಥದೊಳಗೆ
ನಗುನಗುತ ಕೈಹಿಡಿದು ಸಾರಥ್ಯ ಮಾಡುವಾಗ

ಜೊತೆಯೆಂದ ಮಾತ್ರಕ್ಕೆ ಭಿನ್ನವಿಲ್ಲದೆಯಿಲ್ಲ
ಬಣ್ಣಗಳ ಸಮರಸವೇ ಒಂದು ಸುಂದರ ಚಿತ್ರ
ಬದುಕು ಹೀಗೇ ಎಂದು ಯಾರು ಕಂಡವರಿಲ್ಲ
ನಮ್ಮ ಬಟ್ಟೆಯ ನಾವೆ ಕಂಡು ಕಟ್ಟಿಕೊಳಬೇಕು

ಹಿಂಚೆ-ಮುಂಚೆಗಳ ಸುಳಿ ಧೂಳಗೋಪುರವೆತ್ತಲು
ಧೃತಿಗೆಡದೆ ಸಾಗುವುದು ಛಲಬಲ್ಲವರ ಬಂಡಿ
ಸಾಕು-ಬೇಕುಗಳೊಳಗೆ ಸರಿಯುತಿರೆ ಕನಸುಗಳು
ನೆಮ್ಮದಿಯ ಸೆಲೆ ನಿಲುಕಿ ನಮ್ಮದೇ ಒಂದು ಬಿಂದು

ತೂಗುಲೋಲಾಕಿನ ಲಾಸ್ಯ ನಡೆಯಂತೆ ಜಗ
ಎದ್ದ ಅಲೆ ಇಳಿದೆದ್ದು ಸೂರ್ಯ ತಾರಗೆ ಚಂದ್ರ
ಅರಿಯದುದ ಅರಿತಂದು ನಮ್ಮ ಗುರಿ ನಿಚ್ಚಳವು
ಅರಿವಿನತ್ತಲೆ ಗಮನ ಇಡಲು ಸುಗಮವು ಪಯಣ
(೧೦-ಸೆಪ್ಟೆಂಬರ್-೨೦೦೯)

Monday 8 February, 2010

ವಿನಂತಿ

ನಿನ್ನ ನೆನೆಯದೆ ದಿನಗಳಾಗಿವೆ ಮರೆತೆನೆಂದು ಅರಿಯದಿರು
ಬೆಳಗು ಮಂಜಿನ ಬೈಗು ತಂಪಿನ ಸ್ನಿಗ್ಧತೆಯಲಿ ಕಾಣುವೆ

ನಿನ್ನ ಕರೆಯದೆ ದಿನಗಳಾಗಿವೆ ಮುನಿದೆನೆಂದು ಕೊರಗದಿರು
ಹಕ್ಕಿಗೊರಳಲಿ ಮಗುವ ನಗುವಲಿ ಹೆಸರ ಮಾಟವ ಕೇಳುವೆ

ನಿನ್ನ ಕಾಡದೆ ದಿನಗಳಾಗಿವೆ ವ್ಯಸ್ತನೆಂದು ಮರುಗದಿರು
ಬಿರುಸು ಬಿಸಿಲಲಿ ಬೀಳು ಮಳೆಯಲಿ ಕಾಡುವಾಟಕೆ ಕೊಸರುವೆ

ನಿನ್ನ ಸೇರದೆ ದಿನಗಳಾಗಿವೆ ತೊರೆದೆನೆಂದು ತೊಳಲದಿರು
ಉಸಿರು ಹೊರಳಲು ನಾಡಿ ಮಿಡಿಯಲು ಏಕತೆಯನನುಭವಿಸುವೆ

ನಿನ್ನ ಬೇಡದೆ ದಿನಗಳಾಗಿವೆ ಬೆಳೆದೆನೆಂದು ಬೆಚ್ಚದಿರು
ಇಡುತ ಹೆಜ್ಜೆಯ ಹಳ್ಳ ತಿಟ್ಟಲಿ ಹೆಗಲಿನಾಸರೆ ಪಡೆಯುವೆ
(೦೬/೦೭-ಫೆಬ್ರವರಿ-೨೦೦೮)