ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 21 February, 2011

ಸುಮ್ಮನೆ ನೋಡಿದಾಗ...೧೬

ಬಾಗಿಲಲ್ಲಿ ನೆರಳು ಹಾದ ಹಾಗೆ ಅನ್ನಿಸಿ ಎದ್ದು ಬಂದರೆ ಒಮ್ಮೆಲೇ ಅಳಬೇಕೆನ್ನಿಸಿತು. ಹರ್ಷಣ್ಣ ನಿಂತಿದ್ದ.

ನನ್ನ ಮುಖ ಕಣ್ಣುಗಳ ಗಾಬರಿ ಅವನನ್ನು ತಟ್ಟಿತೆ? ನೇರವಾಗಿ ಒಳಗೆ ಬಂದವನು ಸುಮ್ಮನೇ ನನ್ನ ತಲೆ ನೇವರಿಸಿದ. ‘ಶ್ಶ್...!’
ಇವನಿಗೆ ಹೇಗೆ ಗೊತ್ತು ನನ್ನ ತಳಮಳ, ದುಗುಡ? ಅವನ ಸಾಂತ್ವನ ಮಾತ್ರ ನನಗಾಗಿಯೇ ಅವತರಿಸಿದ್ದು.

‘ಚಿಕ್ಕತ್ತೇ...’ ಅಮ್ಮನ ಕೋಣೆಯ ಬಾಗಿಲು ತಟ್ಟುತ್ತಾ ಕರೆದ ದನಿಯಲ್ಲಿ ಮೃದುತ್ವದ ಜೊತೆಗೇ ಘನತೆಯೂ ಇದ್ದದ್ದು ಹೇಗೆ?
ಒಂದೇ ಕ್ಷಣ. ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೆ. ‘ನೀನ್ಯಾವಾಗ ಬಂದದ್ದು ಮಾರಾಯ?’ ಅಮ್ಮ ನಗುತ್ತಿದ್ದರು, ಕೆಂಪುಕಣ್ಣುಗಳನ್ನು ಮರೆಸುತ್ತಾ. ನೆಮ್ಮದಿಯ ಹನಿಗಳನ್ನು ಅಂಗಳಕ್ಕೇ ಉದುರಿಸಲು ಹೊರಗೋಡಿದೆ. ಓಣಿ ತುದಿಯಲ್ಲಿ ನೇಹಾ! ಅವಳ ಹಿಂದೆಯೇ ಸುಮುಖ್ ಅಂಕಲ್ ಮತ್ತು ನಳಿನಿ ಆಂಟಿ. ಎಲ್ಲ ದೇವತೆಗಳೂ ಇವತ್ತು ನನ್ನ ಮೇಲೆ ಪ್ರಸನ್ನರಾದದ್ದು ಹೇಗೆ? ಎಂದೂ ಇಲ್ಲದ ಖುಷಿ ಮನೆಯಲ್ಲಿ ತುಂಬಿಕೊಂಡಿತು.

‘ಅಕಳಂಕ’ ಮನೆಯಲ್ಲಿ ನಾವು ಬಾಡಿಗೆಗೆ ಇದ್ದಾಗ... ಇಪ್ಪತ್ತು ವರ್ಷಗಳ ಹಿಂದಿನ ನಂಟಿನ ಈ ಹರ್ಷಣ್ಣ... ನಮ್ಮ ಮೂಲಕವೇ ಅವನ ಪರಿಚಯವಾಗಿದ್ದ ನಳಿನಿ ಆಂಟಿ, ಸುಮುಖ್ ಅಂಕಲ್ ಈಗ ಅವನನ್ನಿಲ್ಲಿ ನೋಡಿ ಅಚ್ಚರಿಯಿಂದ ಖುಷಿಪಟ್ಟರು. ಸೂಕ್ಷ್ಮ ಮನದ ನಳಿನಿ ಆಂಟಿ ಮೊದಲೇ ಯೋಚನೆ ಮಾಡಿ ಹಾಲು ತಗೊಂಡೇ ಬಂದಿದ್ದರಿಂದ ನೇಹಾ ಮತ್ತು ನಾನು ಅಂಗಡಿಗೆ ಓಡುವುದು ತಪ್ಪಿತಾದರೂ ನೇಹಾಳಿಗೆ ನನ್ನ ಮೊದಲ ಕಥೆಯ ಹಿನ್ನೆಲೆ ಹೇಳುವ ಅವಕಾಶ ಇಲ್ಲವಾದ್ದಕ್ಕೆ ಒಂದಿಷ್ಟು ಖೇದ ನನ್ನೊಳಗೆ. ಇದನ್ನೇ ಗ್ರಹಿಸಿದಳೋ ಅನ್ನುವಂತೆ ನೇಹಾ, ‘ಶಿಶಿರಾ, ನಿನ್ ಹತ್ರ ಏನೋ ಕೇಳ್ಬೇಕು, ಬಾ ರೂಮಿಗೆ...’ ಅಂತ ನನ್ನ ರೂಮಿಗೆ ಎಳೆದು ಬಾಗಿಲು ಹಾಕಿಕೊಂಡಳು.

ಕಥೆಯ ಹಿನ್ನೆಲೆ ಮತ್ತು ಅವಳನ್ನು ಕರೆದ ಹಿನ್ನೆಲೆಯನ್ನೂ ತಿಳಿಸಿದೆ.
‘ಏನಾಗ್ತಾ ಉಂಟು ಒಳಗೆ?’ ಹರ್ಷಣ್ಣ ಬಾಗಿಲು ಕೆರೆದ.
‘ಬಂದೆವು...’ ಉತ್ತರಿಸಿದೆ, ಸ್ವರ ನಡುಗದ ಹಾಗೆ ಜಾಗ್ರತೆವಹಿಸುತ್ತಾ.
‘ಹೀಗೇ ಏನಾದ್ರೂ ಆಗಿರ್ಬಹುದು, ಅದ್ಕೇ ನೀನು ನನ್ನನ್ನು ಕರ್ದದ್ದು ಅಂತ ಅಮ್ಮ ಹೇಳಿದ್ದಕ್ಕೆ ನಾವು ಮೂವರೂ ಬಂದದ್ದು’ ಅಂದಳು ನೇಹಾ. ನಳಿನಿ ಆಂಟಿಗೆ ಮತ್ತೊಮ್ಮೆ ಮನದಲ್ಲೇ ವಂದಿಸಿದೆ.

ಮತ್ತೊಮ್ಮೆ ಬಾಗಿಲ ಮೇಲೆ ಬೆರಳುಗಳ ನಾಟ್ಯ, ಮೊದಲಿನದಕ್ಕಿಂತ ಭಿನ್ನವಾಗಿ. ‘ಅಂಕಲ್...’ ‘ಪಪ್ಪಾ...’ ಇಬ್ಬರೂ ಒಟ್ಟಿಗೇ ರಾಗ ಎಳೆದೆವು. ಗಲಗಲನಗು ಅತ್ತಲಿಂದ ಉತ್ತರಿಸಿತು. ಬಾಗಿಲೂ ಮೌನ ಮುರಿಯಿತು. ನಡುಮನೆಯಲ್ಲಿ ಸೋಫಾದಲ್ಲಿ ಹರ್ಷಣ್ಣ ನಮ್ಮತ್ತಲೇ ನೋಡತ್ತಿದ್ದ. ಅಚಾನಕ್ ನೇಹಾಳ ಕಡೆ ನೋಡಿದೆ, ಅವಳ ನೋಟ ನೆಲವನ್ನು ಕೆಣಕುತ್ತಿತ್ತು. ಸೊಂಟಕ್ಕೆ ತಿವಿದೆ. ಅಡುಗೆಮನೆಗೆ ಬೀಸುಹೆಜ್ಜೆ ಹಾಕಿದಳು. ಹಿಂಬಾಲಿಸಿದ್ದು ನಾನೊಬ್ಬಳೇ ಅಲ್ಲವೆನ್ನುವುದು ನಮ್ಮಿಬ್ಬರಿಗೂ ಗೊತ್ತು.

ಒಳಗೆ ಹೋಗುತ್ತಾ ಸುಮುಖ್ ಅಂಕಲ್ ಕಿವಿಯಲ್ಲಿ ಉಸುರಿದೆ, ‘ನೇಹಾ ಈಸ್ ಕ್ಲೀನ್ ಬೌಲ್ಡ್. ಅಂಕಲ್...’ ‘ಐ ನೋ ಡಿಯರ್...’ ಅಂದರು ತಲೆಯಾಡಿಸುತ್ತಾ. ಎಂದೂ ಇಲ್ಲದ ಸಲಿಗೆಯಲ್ಲಿ ಹರ್ಷಣ್ಣನತ್ತ ನೋಡಿ ಕಣ್ಣು ಮಿಟುಕಿಸಿ ಹುಬ್ಬು ಹಾರಿಸಿದೆ. ಆ ನಗುವನ್ನು ನೇಹಾ ಬಾಗಿಲ ಸಂದಿಯಿಂದ ನೋಡಿದಳೇ? ಅಥವಾ ಅವಳಲ್ಲಿದ್ದಾಳೆಂದೇ ಹರ್ಷಣ್ಣ ಅಂಥಾ ನಗು ನಕ್ಕನೆ? ಯಾರಿಗ್ಗೊತ್ತು?

ಘಳಿಗೆಗಳ ಮೊದಲು ನನ್ನನ್ನು ಆವರಿಸಿಕೊಂಡಿದ್ದ ಗಾಬರಿ, ಭಯ, ಖಿನ್ನತೆಗಳು ಎಲ್ಲಿ ಹಾರಿಹೋದವೆಂದು ಅರಿಯುವ ಕುತೂಹಲವೇ ಇಲ್ಲವಾಯಿತು. ಒರಟು ಬರಡು ಭೂಮಿಯಂತಿದ್ದ ಈ ಮನೆಯೊಳಗೆ ಈಗಷ್ಟೇ ಅರಳುತ್ತಿರುವ ಇನ್ನೊಂದು ಮಾಧುರ್ಯದ ಕಂಪು ನನ್ನೊಳಗಿನ ವಸಂತನನ್ನೂ ಹೊಡೆದೆಬ್ಬಿಸಿತು. ನನ್ನ ಕೆನ್ನೆಗಳನ್ನು ಎಲ್ಲ ಕಣ್ಣುಗಳಿಂದ ಮುಚ್ಚಿಡಲಿ ಹೇಗೆ? ಕಳ್ಳರಂತೆ ನೋಟ ತಪ್ಪಿಸುತ್ತಿದ್ದಾಗ ನೇಹಾ ಮತ್ತು ಹರ್ಷಣ್ಣ ಏಕಕಾಲದಲ್ಲಿ ನನ್ನನ್ನು ಕರೆದದ್ದು ಯಾಕೆ? ಮೂರು ಹಿರಿಯರು ಅಡುಗೆಮನೆಯ ಟೇಬಲ್ ಸುತ್ತ ನಿಂತಿದ್ದರು. ಕಾಫಿ ಕಪ್ ಹಿಡಿದು ನಾವು ಮೂವರು ಟೆರೇಸ್ ಹತ್ತಿದೆವು.

ಆ ಸಂಜೆ ನನ್ನ ಇಪ್ಪತ್ತು ವರ್ಷಗಳ ಜೀವನದ ನೆನಪಿರುವ ದಿನಗಳಲ್ಲೇ ಅತ್ಯಂತ ಸುಂದರ ಸಂಜೆ. ತೆಂಗಿನ ಗರಿಗಳ ನಡುವೆ ಕೆಂಪು-ಕಿತ್ತಳೆ ಚೆಂಡು ಜಾರುತ್ತಾ ಜಾರುತ್ತಾ ಇನ್ನಷ್ಟು ಕೆಂಪಾಗುವುದನ್ನು ಮೂರುಜೋಡಿ ಕಣ್ಣುಗಳ ಒಂದೇ ನೋಟ ಹೀರಿಕೊಳ್ಳುತ್ತಿತ್ತು. ಹರ್ಷಣ್ಣ ಮತ್ತು ನೇಹಾಳ ನಡುವೆ ನಿಂತಿದ್ದ ನಾನು ಯಾವುದೋ ಕ್ಷಣದಲ್ಲಿ ನೇಹಾಳ ಇನ್ನೊಂದು ಬದಿಗೆ ಸರಿದುಕೊಂಡಿದ್ದೆ. ನಾನು ತೆರವು ಮಾಡಿದ್ದ ಜಾಗವನ್ನು ಅದ್ಯಾವುದೋ ಕಂಪು ಅಡರಿಕೊಂಡಿತು. ಕತ್ತಲಮರುವ ಮೊದಲೇ ಅಂಗಳದ ದೀಪ ಹೊತ್ತಿತು. ಕೆಳಗಿಳಿದು ಬಂದೆವು, ಗಂಧರ್ವರಂತೆ ತೇಲುತ್ತಾ.