ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 7 November, 2014

ಗುರುತು (ಮಿನಿ ಕಥೆ)


          ಎಷ್ಟೋ ದಿನಗಳಿಂದ- ದಿನವೇನು, ವಾರಗಳೇ ಆದವು- ಇದ್ದೊಬ್ಬ ಮಗನೂ ಎಲ್ಲೋ ಕಳೆದುಹೋಗಿದ್ದಾನೆ. ಫೋನಾಗಲಿ, ಪತ್ರವಾಗಲಿ ಇಲ್ಲ.  ಬೇರಾವುದೇ ಸಂವಹನ ಇಲ್ಲದ ಹಳ್ಳಿ ನಮ್ಮದು. ಎಲ್ಲ ಬಗೆಯ ಜನರೂ ಬದುಕಿ ಬಾಳುತ್ತಿರುವ ಹಳ್ಳಿ. ಮಗ ಯಾಕೆ ಎತ್ತ ಹೇಗೆ ಹೊರಟುಹೋದನೆಂದು ಅರಿಯದ ನಾವಿಬ್ಬರು ಬರಿಯ ಗೊಂದಲದ ಕಾಡೊಳಗೆ ಮೋಡವಾಗಿದ್ದೇವೆ. ಇವಳಿಗೂ ಕಣ್ಣೀರು ಬತ್ತಿ ಹೋಗಿದೆ. ಮುಂದಿನ ದಾರಿಯೆಲ್ಲ ಮಬ್ಬುಮಬ್ಬು. ಹೊಟ್ಟೆ-ಬಟ್ಟೆಗಳ ಪರಿವೆಯಿಲ್ಲದ ಪರಿಸ್ಥಿತಿ ಬರದಿರಲಿ ಎಂಬುದೊಂದೇ ದಿನನಿತ್ಯದ ಪ್ರಾರ್ಥನೆಯಾಗುಳಿದಿದೆ. ಕಾಲಕ್ಕೆ ಕರುಣೆಯಿಲ್ಲ, ಸಾಗುತ್ತಲೇ ಇದೆ; ನಾವು ಜೊತೆಯಲ್ಲಿ ಕುಂಟುತ್ತಿದ್ದೇವೆ. 
          ಹದಿನಾರು ಕಿ.ಮೀ. ದೂರದ ಪೇಟೆಯಿಂದ ಪೊಲೀಸ್ ಪೇದೆಯೊಬ್ಬ ಸೈಕಲ್ ಮೆಟ್ಟಿಕೊಂಡು ನಮ್ಮ ಅಂಗಳದಲ್ಲಿ ಇಳಿದಾಗ ಎದೆ ಯಾಕೆ ಒಡೆಯಲಿಲ್ಲವೊ? ಮಾನವೀಯವಾಗಿ ಆತನಿಗೆ ಬೆಲ್ಲ-ನೀರು ಒದಗಿಸಿ, ಉಪ್ಪು-ಮೆಣಸು-ಇಂಗು ಬೆರೆಸಿದ ಮಜ್ಜಿಗೆ ಕುಡಿಸಿದೆವು. ಕೆಲಕ್ಷಣ ತಣ್ಣಗೆ ಕುಳಿತವನು ಸೈಕಲ್ಲೇರಿ ಬರುವಾಗ ಎಲ್ಲಿಯೋ ಕಳೆದುಕೊಂಡಿದ್ದ ಉಸಿರನ್ನು ಮತ್ತೆ ಹಳ್ಳಿಗಾಳಿಯಲ್ಲಿ ಕಂಡುಕೊಂಡ. ಮೆಲ್ಲನೆ ಸ್ವರವೆತ್ತಿದ.
          "ಪೇಟೆಯ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಒಂದು ಅನಾಮಿಕ ಹೆಣ ಸಿಕ್ಕಿದೆ. ನಿಮ್ಮ ಮಗ ಕಳೆದುಹೋಗಿರುವ ಬಗ್ಗೆ ದೂರು ದಾಖಲಾಗಿದೆಯಲ್ಲ. ಅದಕ್ಕೆ ಇದನ್ನು ತಿಳಿಸಿ ಹೋಗೋಣಂತ ಬಂದೆ. ಇಂದು ನನಗೆ ರಜೆ. ಸಾಹೇಬರು ತಿಳಿಸೋದಕ್ಕೆ ಹೇಳಿದಾಗ ಬೇರೆ ಯಾರೂ ಇಷ್ಟು ದೂರ ಬರೋದಿಕ್ಕೆ ಒಪ್ಪಿಕೊಳ್ಳಲಿಲ್ಲ. ನೀವು ಈಗಲೇ ಹೊರಡೋದಾದರೆ ನನ್ನ ಸೈಕಲ್ಲಲ್ಲೇ ಕರೆದುಕೊಂಡು ಹೋಗುತ್ತೇನೆ..." ಬರುತ್ತೀರಾ ಎನ್ನುವಂತೆ ನನ್ನ ಮುಖ ನೋಡಿದ; ನಾನು ಇವಳ ಮುಖ... ಕ್ಷಣಗಳು ಸಾಯುತ್ತಿದ್ದವು. ಅಂಗಳದ ತೆಂಗಿನ ತುದಿಯಲ್ಲಿ ಕಾಗೆಯೊಂದು ಚೀರಿತು. ಬರುತ್ತೇನೆಂದೆ, ಬಟ್ಟೆ ಬದಲಿಸಲು ಒಳಗೆ ನಡೆದೆ.
          ಇವಳು ಬಿಕ್ಕುಗಳ ನಡುವೆಯೇ ತೊದಲುತ್ತಿದ್ದಳು: "ಎಷ್ಟು ದಿನ ಆಯ್ತು... ...ಸಿಕ್ಕಿ?"
          "ನಿನ್ನೆಯಷ್ಟೇ ಸಿಕ್ಕಿದ್ದಮ್ಮ. ಸಂಜೆ ನಾಲ್ಕರ ಹೊತ್ತಿಗೆ ಕೋಟೆಕಣಿಯಲ್ಲಿ ಪೊದರಿನೊಳಗಿತ್ತು. ಮೊನ್ನೆ ನಮ್ಮಲ್ಲಿ ಕೋಮು ಗಲಭೆ ಆಗಿತ್ತು. ಅಲ್ಲಿ ಕೆಲವರನ್ನು ಅರೆಸ್ಟ್ ಮಾಡಿದ್ದೇವೆ. ಇವ ನಮ್ಮೂರಿನ ಹುಡುಗನಲ್ಲ ಅಂತ ಕಂಡಿತು. ಕೋಮು ಗಲಭೆಯಲ್ಲಿ ಶಾಮೀಲಾದ ಯಾರಿಗೂ ಪರಿಚಯ ಇಲ್ಲದ ಹುಡುಗ. ಹಾಗಾಗಿ... ಇಲ್ಲಿ ಬಂದೆ..."
          "ಎಷ್ಟು ವಯಸ್ಸಿದ್ದೀತು ಅವನದು?" ನಮ್ಮವನಲ್ಲವೆಂದು ಸುಳಿವು ಹುಡುಕಲು ಹೊರಟಂತಿತ್ತು ಅವಳ ಪ್ರಶ್ನೆ.
          "ಸುಮಾರು ಇಪ್ಪತ್ತೈದು ಇಪ್ಪತ್ತೆಂಟು ಇರಬಹುದಮ್ಮ..."

          ಅವನೇ ಏನು? ಎದೆ ನಿಲ್ಲದು. ಮೌನ ಮಾತ್ರ ಸ್ಥಾಯಿ.

          ಸೈಕಲ್ಲೇರಿ ಹೊರಟೆವು. ಸ್ವಲ್ಪ ದೂರ ನಾನು ಹಿಂದೆ, ಮತ್ತೆ ಸ್ವಲ್ಪ ದೂರ ಅವನು. ಹದಿನಾರು ಕಿ.ಮೀ. ಸೈಕಲ್ ಸವಾರಿ, ಅದೂ ಡಬಲ್ ರೈಡ್, ಜೊತೆಗೆ ಕುಸಿಯುವ ಹೃದಯ... ಬಹುತೇಕ ದಾರಿ ಸ್ಮಶಾನ ಮೌನ. ಇಬ್ಬರಲ್ಲೂ ಮಾತು ಕಡಿತಗೊಳಿಸುವ ಉದ್ವೇಗ. ಪೇಟೆಯ ಸಾರ್ವಜನಿಕ ಆಸ್ಪತ್ರೆಯ ಶೈತ್ಯಾಗಾರದ ಬಾಗಿಲೆದುರು ಬಂದಾಗ ಆತ ಮಾತೆತ್ತಿದ: "ಸ್ವಾಮಿ, ಕೊಂಚ ದೃಢವಾಗಿರಿ, ನಿಗಾ ಇಟ್ಟು ನೋಡಿ. ಗುರುತು ಸಿಕ್ಕೋದು ಸ್ವಲ್ಪ ಕಷ್ಟ. ಕಾಗೆ-ನಾಯಿಗಳು ಬಾಯಿ ಹಾಕಿವೆ..." ಕಾಲುಗಳು ನನ್ನನ್ನು ಎತ್ತಿ ಹಿಡಿಯುತ್ತಿಲ್ಲ. ಕೈಗೆ ಗೋಡೆ ಸಿಕ್ಕಿತು.
          "ಇವ್ರೇಯಾ?" ಗಡಸು ಸ್ವರಕ್ಕೆ ಕಣ್ಣು ತೆರೆಯಲೇಬೇಕಾಯ್ತು. ವೈದ್ಯರ ಜೊತೆಗೆ ಪೊಲೀಸ್ ಇನ್ಸ್ಪೆಕ್ಟರ್. ಪೇದೆ ಹೌದೆಂದಿರಬೇಕು. ಬಾಗಿಲು ತೆರೆಯಿತು. ಒಳಗೆ ಒಂದೇ ಒಂದು ಟೇಬಲ್. ಅದರ ಮೇಲೆ ಬಿಳಿ ಹೊದಿಕೆ ಹೊದ್ದ ಮುದ್ದೆ. ಇನ್ಸ್ಪೆಕ್ಟರ್ ಮುಂದೆ ಹೋಗಿ ಮುಖದ ಬಟ್ಟೆ ಸರಿಸಿದರು. ಮತ್ತೆ ನನ್ನ ಕಾಲುಗಳ ಮುಷ್ಕರ, ಕಣ್ಣುಗಳ ಕಾತರ ಅವಕ್ಕೇನು ಗೊತ್ತು! ಪಾದಗಳು ನೆಲಬಿಡಲಾರವು. ಅವುಗಳನ್ನು ಎಳೆಯುತ್ತಾ ಟೇಬಲ್ ಬಳಿಗೆ ಸಾಗಿದೆ. ಕುಂಟು ನಾಯಿ ಜೀವದಾಸೆಯಿಂದ ಮಾಂಸ ತುಂಡಿನ ಕಡೆ ಎಳೆದಾಡುವಂತೆ ಅನಿಸಿತ್ತು ಆ ಕ್ಷಣ. ಜೀವದಾಸೆಯೇ. ಇವನು ನನ್ನ ಕುಡಿಯಾಗಿಲ್ಲದಿರಲಿ. ಜೊತೆಗೇ ಇನ್ನೊಂದು ಯೋಚನೆ, ನನ್ನದಲ್ಲದಿದ್ದರೂ ಯಾರೋ ಒಬ್ಬ ತಂದೆಯ ಮಗ. ಅಮ್ಮನ ಜೀವ. ಅಯ್ಯೋ! ದೇವರೇ!  
          ತೆರೆದು ಬಿದ್ದ ಮುಖದಲ್ಲಿ ಗುರುತು ಹಿಡಿಯುವ ಯಾವುದೇ ಅಂಶಗಳು ಸ್ವಸ್ಥಾನದಲ್ಲಿರಲಿಲ್ಲ. ಕಣ್ಣು, ಮೂಗು, ಬಾಯಿ, ಕೆನ್ನೆ... ಪ್ರಜ್ಞಾಪೂರ್ವಕ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲೇಬೇಕಾಗಿತ್ತು. ಮತ್ತೆ ಊರಿಗೆ ಹಿಂದಿರುಗಿ ಅವಳಿಗೆ ಉತ್ತರಿಸಬೇಕಾಗಿತ್ತು. ಕುತ್ತಿಗೆ, ಹಣೆ... ಎಲ್ಲೆಲ್ಲೂ ಅವನ ಸುಳಿವಿಲ್ಲ. ಗುಂಗುರು ಕೂದಲು ಒದ್ದೆಯಾಗಿ ನೇರವಾಗಿಯೇ ಕಂಡವು. ಮತ್ತೆ ಗಮನಿಸಿದಾಗ ಸುರುಳಿಸುರುಳಿಗಳ ಅರಿವಾಯ್ತು. ಜೀವ ಝಲ್ಲೆಂದಿತು. ಅಲ್ಲೇ ಬದಿಯಲ್ಲಿದ್ದ ಒಂದು ಕಿವಿಯೂ ಯಾವುದರದೋ ನಾಲಿಗೆ ರುಚಿ ತಣಿಸಿರಬೇಕು. ಏನೋ ಆಸೆಯ ಝಲಕು ಇನ್ನೊಂದು ಕಿವಿಯನ್ನೂ ಗಮನಿಸಲು ಸೂಚಿಸಿತು. ಮತ್ತೆ ಮತ್ತೆ ದಿಟ್ಟಿಸಿದೆ. ನೋಡೇ ನೋಡಿದೆ. ಅಷ್ಟೂ ಹೊತ್ತು ನನ್ನೊಳಗೆ ಅಡಗಿ ಹುದುಗಿ ಮುದುಡಿ ಕೂತಿದ್ದ ಉಸಿರು ಬುಸ್ಸಂತ ಹೊರಬಂತು. ಕೋಣೆಯಿಂದ ಹೊರಗೆ, ಊರಿನವರೆಗೂ ಓಡುವ ದೈತ್ಯಶಕ್ತಿ ನನ್ನೊಳಗೆ ಉದ್ಭವಿಸಿತು.
          "ಇದು ನನ್ನ ಮಗನಲ್ಲ..." ಯಾರದೇ ಮುಖ ನೋಡದೆ ಊರ ದಿಕ್ಕಿಗೆ ಓಡತೊಡಗಿದೆ. ಆಸೆಯ ಪುಟ್ಟ ಕಿರಣ ಮೋಡಗಳ ನಡುವಿಂದ ಇಣುಕತೊಡಗಿತ್ತು. ಆದರೆ, ಎಷ್ಟು ದಿನ ಆ ಕಿರಣ ದಾರಿ ತೋರೀತು ಅನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ.   
(೧೪-ಜೂನ್-೨೦೧೪)

Saturday 13 September, 2014

ಅಂಗಿ ಚುಂಗು - ಸೀರೆ ಸೆರಗು

"ಹರಟೆ ಕಟ್ಟೆ"ಯಲ್ಲಿ ಪ್ರಕಟಿತ.
ಸಂದರ್ಭ: "ಎಂಟನೇ ವಿಶ್ವ ಕನ್ನಡ ಸಮ್ಮೇಳನ" -  ಅಕ್ಕ-ಕೆ.ಕೆ.ಎನ್.ಸಿ; ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯಾ, ಅಮೆರಿಕ.


"ಅಂಗಿ ನಿನಗೆ ಇಷ್ಟವಾ, ಸೀರೆಯಾ? ನನಗೇನೋ ಅಂಗಿಯೇ ಇಷ್ಟ". ಅಂದಳೊಮ್ಮೆ ನನ್ನೊಬ್ಬ ಗೆಳತಿ. "ಸೀರೆ ಅಂದ್ರೆ, ಅದಕ್ಕೆ ಮತ್ತೆಲ್ಲ ಅಕ್ಕಪಕ್ಕದ ಒಳಹೊರಗಿನ ಜೋಡಿಮೇಳಗಳು ಬೇಕು. ಅಂಗಿ ಅಂದ್ರೆ ಅದೇ ಕಂಪ್ಲೀಟ್ ಅನ್ನುವ ಭಾವನೆ ಬರ್ತದೆ." ಅಂತವಳ ಪೂರಕ ತರ್ಕ. ಕಾಲೇಜು ದಿನಗಳಿಂದಲೂ ಅವಳನ್ನು ಬಲ್ಲೆ. ಅವಳ ತರ್ಕಕ್ಕೆ ಯಾರಾದರೂ ಎದುರುತ್ತರ ಕೊಟ್ಟರೆ ಆಮೇಲೆ ಅವಳ ಮಾತಿನ ಧಾಟಿಯೇ ಬದಲಾಗುತ್ತದೆ. ಕುತರ್ಕ, ಮೊಂಡುವಾದ, ಎತ್ತರ ಸ್ವರ ಸೇರಿಕೊಳ್ಳುತ್ತವೆ. ಹಾಗಾಗಿ, ಅಂಗಿ ಇಷ್ಟದವಳ ಮಾತಿಗೆ ನನ್ನ ಅಂಗೀಕಾರವೇ ಅನ್ನಿಸುವಂತೆ ಸುಮ್ನೇ ಹೂಂಗುಟ್ಟಿದೆ. ತಲೆಯೊಳಗೆ ಚಿಂತನಾಹುಳಗಳ ಗುಂಯ್‌ಗುಟ್ಟುವಿಕೆ ಜೋರಾದಾಗ ಏನೋ ಒಂದು ನೆಪ ಕೊಟ್ಟು ಅವಳನ್ನು ಸಾಗಹಾಕಿದೆ. ಅವಳೇನೋ ಅವಳಂಗಿ ಕೊಡಹಿಕೊಂಡು ಸಾಗಿದಳು. ನನ್ನ ತಲೆಯೊಳಗಿನ ಹುಳ ಸುಮ್ಮನಿರಬೇಕಲ್ಲ! ಅಂಗಿಯ ಚುಂಗು ಹಿಡಿದು ಹೊರಟಿತು; ಜೊತೆಗೇ ಓಲಾಡುವ ಸೆರಗಿನಂಚು.

ಈಗ, ‘ಅಂಗಿ’ ಅಂತಂದಾಗ ನಮಗೆ ಸಾಮಾನ್ಯವಾಗಿ ಥಟ್ಟನೆ ನೆನಪಾಗುವುದು ಗಂಡಸರು ತೊಡುವ ಶರಟು. ಆದರೂ, ನೆನಪಿನಂಗಳದ ಮೂಲೆಯಲ್ಲೆಲ್ಲೋ ಕೆದಕಿದರೆ ಸಿಗುವ ಸಾಮಾನ್ಯ ಪಾರಿಭಾಷಿಕ ಅರ್ಥ- ‘ಬಟ್ಟೆ, ಉಡುಪು’. ‘ಶಾಲೆಗೆ ತಡ ಆಯ್ತು, ಬೇಗ ಅಂಗಿ ಹಾಕ್ಕೊಂಡು ಹೊರಡಿ’ ಅಂತ ಅಮ್ಮ ಎಚ್ಚರಿಸುತ್ತಿದ್ದದ್ದು, ‘ಅಮ್ಮಾ, ನನ್ನ ಅಂಗಿ ಅವ್ಳು ಹಾಕ್ಕೊಂಡ್ಳು’ ಅಂತ ಅಕ್ಕ ದೂರುತ್ತಿದ್ದದ್ದು, ‘ಅಕ್ಕ, ನನ್ನ ಅಂಗಿಯ ಗುಬ್ಬಿ ಹಾಕು’ ಅಂತ ತಂಗಿ ಬೆನ್ನು ತೋರಿಸಿ ನಿಲ್ಲುತ್ತಿದ್ದದ್ದು, ‘ಅಣ್ಣ, ನಿನ್ನ ಈ ಅಂಗಿ ನಂಗೆ ಕೊಡು, ನಿಂಗೆ ಗಿಡ್ಡ ಆಗ್ತದಲ್ಲ; ನನ್ನ ಹೊಸ ಪೆನ್ಸಿಲ್ ನಿಂಗೆ’ ಅಂತ ತಮ್ಮ ವ್ಯವಹರಿಸುತ್ತಿದ್ದದ್ದು, ‘ಶಾಲೆಯಿಂದ ಬಂದು ಅಂಗಿ ಬದಲಾಯ್ಸಿಯೇ ಆಟಕ್ಕೆ ಹೋಗಿ ಮಕ್ಳೇ’ ಅಂತ ಅಜ್ಜಿ ಎಲ್ಲರಿಗೂ ವಾರ್ನಿಂಗ್ ಕೊಡ್ತಿದ್ದದ್ದು... ಇನ್ನೂ ಇಂಥ ಹಲವಾರು ಅಂಗಿಸಾದೃಶ್ಯಗಳೇ ಸಾಲಾಗಿ ಎದುರಾಗುತ್ತವೆ. ಇಲ್ಲೆಲ್ಲ ಅಂಗಿ ಅಂದ್ರೆ ಫ್ರಾಕ್ ಆಗಿರಬಹುದು, ಲಂಗ-ರವಿಕೆ ಇದ್ದಿರಬಹುದು, ಯೂನಿಫಾರ್ಮ್ ಕೂಡಾ ಇದ್ದೀತು, ಹುಡುಗರ ಮಾಮೂಲು ಶರಟು-ಚಡ್ಡಿ ಜೋಡಿಯೂ ಸರಿಯೇ. ಅಂಗಿ ಅನ್ನುವ ಒಂದೇ ಪದ ಇವೆಲ್ಲವನ್ನೂ ಒಳಗೊಂಡು ‘ಉಡುಪು, ಬಟ್ಟೆ-ಬರೆ, ದಿರಿಸು, ಡ್ರೆಸ್’ ಅನ್ನುವ ಪೂರ್ಣಾರ್ಥ ಪಡೆದಿತ್ತು. ಈಗಲೂ ಅದಕ್ಕೇ ಇರಬೇಕು, ಅಂಗಿ ಅಂದ್ರೆ ಕಂಪ್ಲೀಟ್ ಅನ್ನಿಸೋದು ನನ್ನ ಗೆಳತಿಗೆ.

ಒಂದರ್ಥದಲ್ಲಿ ಅದು ನಿಜವೂ ಕೂಡಾ. ಮಹಿಳೆಯರ ಬಟ್ಟೆಬರೆಯನ್ನೇ ಪರಿವೀಕ್ಷಿಸೋಣ. ಕೆಲವಾರು ಲಲನೆಯರ ಪ್ರೀತಿಯ ನೈಟಿಯನ್ನು ಕನ್ಸಿಡರಿಸಿದರೆ, ಅದು ಪೂರ್ಣ ಮೈ ಮುಚ್ಚುವ ನಿಲುವಂಗಿಯೇ ಹೌದು. ಉತ್ತರ ಭಾರತದಿಂದ ದಕ್ಷಿಣಕ್ಕೆ ಲಗ್ಗೆಯಿಟ್ಟು ಲಂಗ-ದಾವಣಿಯನ್ನು ಎತ್ತಂಗಡಿ ಮಾಡಿದ ಚೂಡಿದಾರ್, ಸಲ್ವಾರ್ ಕಮೀಜ್, ಸಲ್ವಾರ್-ಕುರ್ತಾಗಳೂ ಇದಕ್ಕೆ ಹೊರತಲ್ಲ. ಅರ್ಜೆಂಟಿಗಾಗುವ ಅಂಗಿಗಳು. ರಪ್ಪ ಸಿಕ್ಕಿಸಿಕೊಂಡು ಟಪ್ಪ ಹೊರಡಬಹುದು. ಇನ್ನೂ ಹೊಸ ಜಾಯಮಾನದ ಜೀನ್ಸ್-ಟೀಶರ್ಟ್, ಸ್ಕರ್ಟ್-ಬ್ಲೌಸ್, ಸೂಟ್ಸ್ ಎಲ್ಲವೂ ಹೊಸ ಹೆಸರಿನ ಲೇಬಲ್ ತೊಟ್ಟು ‘ಮೈಮರೆಸು’ವ ವೈಯ್ಯಾರದ ಅಂಗಿಗಳೇ ತಾನೇ? ಇವೆಲ್ಲವೂ ‘ಅಂಗಿ’ಯ ಪದರದೊಳಗೆ ಸೇರುವಾಗ ಸೀರೆ ಮಾತ್ರ ಬೇರೆಯೇ ನಿಲ್ಲುತ್ತದೆ! ಅದೇ ಅದರ ವೈಶಿಷ್ಟ್ಯವೂ ಕೂಡಾ.

ನನ್ನ ಗೆಳತಿಯ ಅಂಬೋಣದಂತೆಯೇ ಸರಿ; ಸೀರೆಗಾದರೆ ಸರಿಯಾದ ಒಳ-ಹೊರಗಿನ ಹೂರಣ ಓರಣಗಳು ಇಲ್ಲದೆ ಬಿನ್ನಾಣವಿಲ್ಲ. ಸೀರೆಗೆ ಒಪ್ಪುವ ಬಣ್ಣದ ಒಳಲಂಗ; ಹೊಂದಿಕೆಯಾಗುವ ಬಟ್ಟೆಯಿಂದ ಅಥವಾ ಅದೇ ಸೀರೆಯ ತುಣುಕಿಂದ ನಾಜೂಕಾಗಿ ಕತ್ತರಿಸಲ್ಪಟ್ಟು ಇನ್ನಷ್ಟು ಜೋಪಾನವಾಗಿ ಹೊಲಿಯಲ್ಪಟ್ಟಿರುವ ರವಿಕೆ; ಹಣೆಗೊಂದು ಸುಂದರ ತಿಲಕ ಯಾ ಕುಂಕುಮ ಯಾ ಬಿಂದಿ ಯಾ ಬೊಟ್ಟು; ಕಿವಿಗಳಲ್ಲಿ ಫಳಗುಟ್ಟುವ ಓಲೆಗಳು ಅಥವಾ ಜೋತಾಡುವ ಝುಮಕಿಗಳು; ಕತ್ತಿನ ಸುತ್ತ ವೈಯ್ಯಾರದ ಒಂದೆರಡೆಳೆ ಸರ; ಮುಡಿಯಲ್ಲಿ ಮೆಲ್ಲುಲಿವ ಮಲ್ಲಿಗೆ; ಮುಂಗೈಗಳಲ್ಲಿ ಘಲುಘಲಿಸುವ ಗಾಜಿನ ವಾ ಬಂಗಾರದ ಬಳೆಗಳು; ಅನುಕೂಲ ಮತ್ತು ಇಷ್ಟವಿದ್ದರೆ ಪಾದಮಣಿಕಟ್ಟಿನಲ್ಲಿ ಕುಲುಕುಲು ನಲಿಯುವ ಬೆಳ್ಳಿ ಗೆಜ್ಜೆ... ಇವಿಷ್ಟಿದ್ದರೆ ಅಂಥ ನಾರಿಗೆ, ಸೀರೆಗೆ ಸಿಗುವ ಮೆಚ್ಚುನೋಟಗಳಿಗೆ ಬೇರೆಲ್ಲಾ ಅಂಗಿಗಳು ಅಸೂಯೆಯಿಂದ ಉರಿಯಲೇಬೇಕು. ಹಾಗಂತ, ಇಷ್ಟೆಲ್ಲ ದಿನದಿನವೂ ಅಲಂಕರಿಸಿಕೊಳ್ಳುವುದು ಸುಲಭವೆ? ಅದಕ್ಕೇ ನಾವು, ನವನಾರೀಮಣಿಯರು ಅಂಗಿಗೆ ಅಡಿಯಾಳಾಗಿದ್ದು ಅಂತ ಗಾಢವಾಗಿ ಅನಿಸಹತ್ತಿತು.

ಆದರೂ, ನೆನಪಿನ ಖೋಲಿಯ ಬಾಗಿಲು ತೆರೆದಿದ್ದೇನಲ್ಲ, ಅದು ಸುಮ್ಮನಿರುತ್ತದೆಯೆ? ಒಂದೊಂದಾಗಿ ಸುಕ್ಕು ಕೊಡವಿಕೊಳ್ಳುತ್ತಾ ಎದ್ದೆದ್ದು ಬರುವ ಸೆರಗಿನಂಚುಗಳಿಗೆ ಚಾವಡಿಯಲ್ಲಿಯೇ ಚಾಪೆ ಹಾಸಿಕೊಟ್ಟೆ. ಅಜ್ಜನ ಮನೆಯ ತೋಟದ ಮೂಲೆಯ ತೋಡಿನಲ್ಲಿ ಆಟವಾಡಿ ಅಜ್ಜಿಯ ಸೆರಗಿನಲ್ಲಿ ಕೈಕಾಲು ಒರಸಿಕೊಂಡಲ್ಲಿಂದ ಶುರುವಾಗಿ ಮಾವನವರ ಭೀಮರಥ ಶಾಂತಿಯ ದಿನ ರೇಶ್ಮೆ ಸೀರೆ ಸೆರಗಿನಲ್ಲಿ ಹೋಮದ ಹೊಗೆಗೆ ಕರಗುತ್ತಿದ್ದ ಮಕ್ಕಳ ಮೂಗು ಒರಸಿದಲ್ಲಿಯವರೆಗೆ, ಅಮ್ಮನ ತುಂಡು ಸೀರೆಯನ್ನುಟ್ಟು ಓರಗೆಯವರ ಜೊತೆ ಅಟ್ಟದಲ್ಲಿ ಮನೆಯಾಟ ಆಡಿದಲ್ಲಿಂದ ಹಿಡಿದು ಲಕ್ಷಾನುಗಟ್ಟಲೆ ಬೆಲೆಯ ಸೆರಗುಗಳ ಅಮೋಘ ಜರಿ-ವಜ್ರ-ವಿನ್ಯಾಸಗಳನ್ನು ನೆಟ್ಟಲ್ಲಿ ನೋಟವಿಟ್ಟಲ್ಲಿಯ ತನಕ, ಸೀತಜ್ಜಿಯ ಕೆಂಪು ಮಡಿಸೀರೆಯನ್ನು ಮುಟ್ಟಿ ಏಟು ತಿಂದಲ್ಲಿಂದ ಆರಂಭಿಸಿ ನಾಜೂಕು ಎಂಬ್ರಾಯ್ಡರಿಯ ನವಿಲು ಸೆರಗಿನ ಮೇಲೆ ಕೈಯಾಡಿಸಿದಲ್ಲಿಯವರೆಗೆ ನೂರಾರು ಸಾವಿರಾರು ಹನಿಹನಿಹನಿಗಳು ಚಾಪೆಯಲ್ಲಿ ಒತ್ತಟ್ಟಾದವು. ಮನದಂಗಳದಲ್ಲಿ ಭಾವನೆರೆ ಉಕ್ಕಿತು. ಆ ಎಲ್ಲಾ ಹನಿಗಳಲ್ಲಿಯೂ ಅಜ್ಜಿಯಾಗಲಿ, ಅಮ್ಮನಾಗಲಿ, ದೊಡ್ಡಮ್ಮ- ಚಿಕ್ಕಮ್ಮ- ಅತ್ತೆಯರಾಗಲಿ, ಅಮೋಘ ಸೀರೆಯ ಬೆಡಗಿಯರಾಗಲಿ, ಮಡಿಸೀರೆಯ ಸೀತಜ್ಜಿಯಾಗಲಿ, ಅಥವಾ ನಾನೇ ಆಗಿದ್ದಿರಲಿ, ಅಂಗಿ ಹಾಕಿಕೊಂಡಿದ್ದಿದ್ದರೆ ಈ ಹನಿಹನಿ ಒರತೆಗೆ ಪುಟಿಯುವ ಉತ್ಸಾಹ ಇಷ್ಟೊಂದು ಇರುತ್ತಿತ್ತೇ? ಒರತೆಯಾಗಿದ್ದರೂ ನೆರೆಯಾಗುತ್ತಿತ್ತೇ? ಖಂಡಿತಾ ಇಲ್ಲವೆನಿಸಿತು. ಯಾವುದೇ ಅಂಗಿಚುಂಗಿನಿಂದ ಮಗುವಿನ ಕರಗುಮೂಗನ್ನು ಒರಸಲಾಗುತ್ತದೆಯೆ? ಅದಕ್ಕೆ ಮಮತೆಯ ಸೆರಗಿನಂಚೇ ಸೈ.

ಸೆರಗಿನಂಚು ಅಂದಾಕ್ಷಣ ಮತ್ತೆ ಮೆರವಣಿಗೆ ಶುರು. ದಸರಾ ರಜೆಯಲ್ಲಿ ನಮ್ಮನೆಯಿಂದ ಅಜ್ಜಿಯ ಜೊತೆ ಊರಿಗೆ ಹೋಗುವಾಗ ಗದ್ದೆಯ ಬದುವಿನಲ್ಲಿ ಎಚ್ಚರದ ಹೆಜ್ಜೆ ಇಡುತ್ತಲೇ ಆಯ ತಪ್ಪಿದ್ದು ನಾನೋ ನನ್ನ ಹೆಗಲಲ್ಲಿದ್ದ ಭಾರದ ಚೀಲವೋ? ಅಂದು ಮೈಗೆಲ್ಲ ಮೆತ್ತಿದ್ದ ಕೆಸರಿನಂಟು, ನೋವು ಅವಮಾನ ಸಮೇತ, ಅಜ್ಜಿಯ ಸೆರಗನ್ನು ಸೇರಿಕೊಂಡದ್ದು ಯಾವ ಮಾಯಕದಲ್ಲಿ? ಬೇಸಗೆಯ ರಜೆಯಲ್ಲಿ ಒಂದು ಸಂಜೆ ಆಳು ಲಚುಮಿಯ ಜೊತೆಗೆ ಕಾಡಂಚು ಸುತ್ತುವಾಗ ಸಿಕ್ಕಿದ್ದ ಕೆಂಪು ಕೆಂಪು ಚಂಪೆ ಹಣ್ಣುಗಳ ಗೊಂಚಲುಗಳು ಮನೆತನಕ ಜೋಪಾನವಾಗಿ ಬಂದದ್ದು ಲಚುಮಿಯ ಸೆರಗಿನೊಳಗಿನ ಜೋಳಿಗೆಯಲ್ಲೇ. ಮರದಡಿಯಲ್ಲಿ ತಿಂದಾಗ ಲಭಿಸಿದ ರುಚಿಗೂ ಮನೆಯಂಗಳದಲ್ಲಿ ಲಚುಮಿ ತುಸು ಉಪ್ಪು ನೀರಲ್ಲಿ ಒಂದೈದು ನಿಮಿಷ ಹಾಕಿಟ್ಟು ನಂತರ ತೊಳೆದು ಸೆರಗಿನಂಚಲ್ಲಿ ಒರಸಿ ಕೊಟ್ಟ ಚಂಪೆಯಲ್ಲಿ ದಕ್ಕಿದ ಸವಿಗೂ ವ್ಯತ್ಯಾಸವಿದ್ದದ್ದು ಸುಳ್ಳೇ? ಇನ್ನೊಮ್ಮೆ ಇದೇ ಲಚುಮಿ ಅವಳ ಮನೆಯಲ್ಲಿ ಮಾಡಿದ್ದ ಸಾಂತಾಣಿ (ರುಚಿಗಷ್ಟು ಉಪ್ಪು ಹಾಕಿ ಬೇಯಿಸಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿದ ಹಲಸಿನ ಬೀಜ) ನಮಗೆಲ್ಲ ತಂದುಕೊಟ್ಟದ್ದು ನಮ್ಮನೆಯ ಹಿರಿಯರಿಗೆ ತಿಳಿಯದೇ ಹೋದದ್ದು ಅವಳ ಸೆರಗಿನ ಮಹಿಮೆಯಿಂದಲೇ.

ಒಮ್ಮೆಯಂತೂ ತೋಟದ ಕೆರೆಗೆ ಬಟ್ಟೆ ಒಗೆಯಲು ಹೋದ ಲಚುಮಿ ಮತ್ತು ನಾನು, ಅವಳುಟ್ಟಿದ್ದ ಸೀರೆಯ ಸೆರಗನ್ನೇ ನೀರಿನಲ್ಲಿ ಅರ್ಧ ಮುಳುಗಿಸಿ, ನೀರಿಗೆ ಸಣ್ಣದಾಗಿ ಎಂಜಲು ಉಗುಳಿ, ಏನೋ ತಿನ್ನಲಿದೆಯೆಂದು ಮೀನುಗಳು ಫಕ್ಕನೆ ಬಂದಾಗ ಮುಳುಗಿದ್ದ ಬಟ್ಟೆ ಛಕ್ಕನೆ ಎತ್ತಿಕೊಂಡು ಮೀನು ಹಿಡಿದು, ಬಟ್ಟೆಯಿಂದ ಸೋರುವ ನೀರಿನೊಳಗೆ ಮೀನುಗಳ ಖಾನೇಶ್ಮಾರಿ ತೆಗೆದು, ಅವುಗಳೆಲ್ಲ ವಿಲವಿಲ ಎನ್ನುವ ಮೊದಲೇ ಮತ್ತೆ ಸೆರಗನ್ನು ನೀರಿಗೇ ಇಳಿಸಿಕೊಂಡು... ಎಷ್ಟೋ ಹೊತ್ತು ತನ್ಮಯರಾಗಿದ್ದೆವು. ಕಳ್ಳರ ಹಾಗೆ ಸದ್ದು ಮಾಡದೆ ಬಂದ ಅತ್ತೆಯ ಛಡಿಕೋಲು ನನ್ನ ಬೆನ್ನನ್ನು ಚುರುಗುಟ್ಟಿಸಿದಾಗ ಮಮತಾಮಯಿ ಲಚುಮಿಯ ಒದ್ದೆ ಸೆರಗೇ ಮನೆಯಂಗಳದವರೆಗೆ ನನ್ನ ಬೆನ್ನಿಗೆ ಅಂಟಿದ್ದದ್ದು ಮನದಂಗಳದಲ್ಲಿ ಈಗಲೂ ತಂಪಾಗಿದೆ. ನನ್ನಂಗಿ ನನ್ನನ್ನು ಸಾಂತ್ವನಗೊಳಿಸಿರಲಿಲ್ಲ.

ಇಷ್ಟೇ ಅಲ್ಲ ಸೆರಗಿನ ಮಹಾತ್ಮೆ. ಈಗಷ್ಟೇ ಹುಟ್ಟಿದ ಹಸಿ(ಸು)ಗೂಸನ್ನು ಬೆಚ್ಚಗೆ ಹೊದೆಸಿ ಎದೆಗಪ್ಪಿಕೊಳ್ಳಲು ಪ್ರಶಸ್ತವಾದ ಮೃದುವಸ್ತ್ರಗಳು ಬೇಕಾದ ಬಣ್ಣ-ವಿನ್ಯಾಸಗಳಲ್ಲಿ ಈಗ ಮಾರುಕಟ್ಟೆಯಲ್ಲಿ ಲಭ್ಯ. ಆದರೂ, ಇವುಗಳೆಲ್ಲ ಬರುವ ಮೊದಲು, ನಮ್ಮನ್ನು ಬೆಳೆಸಿದ ಮೃದುತ್ವ ಬೇರೆಯೇ! ಅಮ್ಮ, ಅಜ್ಜಿಯರ ಮೈ ಸುತ್ತಿ ಸುತ್ತಿ ನುರಿಗೊಂಡು, ಒಗೆಯುವ ಕಲ್ಲಿನ ಮೇಲೆ ನರ್ತಿಸಿ ನಯಗೊಂಡು, ಹಗ್ಗದಲ್ಲಿ ಜೋತಾಡಿ ಬಿಸಿಲಿಗೆ ಹದಗೊಂಡ ಹತ್ತಿಮೆತ್ತೆ ಪದರಗಳೇ ನಮ್ಮನ್ನು ಬೆಚ್ಚಗಿರಿಸಿವೆ; ನಮ್ಮ ಎಷ್ಟೆಷ್ಟೋ ಒದ್ದೆಗಳನ್ನು ಹೀರಿಕೊಂಡಿವೆ. ಸೀರೆ ಮಾತ್ರ  ಇಂಥ ಮಾರ್ದವತೆ ಬಿತ್ತರಿಸಬಲ್ಲದು, ಅದೂ ಹೃದಯಕ್ಕೆ ಹತ್ತಿರಾಗುವ ಹತ್ತಿಸೀರೆ (ಒಮ್ಮೊಮ್ಮೆ ವೇಷ್ಟಿ/ ‘ಗಂಡು ಸೀರೆ’). ಯಾವುದೇ ರೀತಿಯ ಅಂಗಿಗೆ ಇದು ಸಾಧ್ಯವೆ?

ಇನ್ನಷ್ಟು ಬೆಳೆದಾಗ, ಅಮ್ಮನ ಮಗ್ಗುಲಿಂದ ಗ್ರಾಜುವೇಟ್ ಆಗಿ ನಮ್ಮದೇ ಚಾಪೆ ಹಾಸಿಕೊಳ್ಳುವಾಗ, ನಮ್ಮನೆಯ ಎಲ್ಲ ಮಕ್ಕಳಿಗೆ ಹಾಸಿಗೆ, ಹೊದಿಕೆಯಾಗುತ್ತಿದ್ದದ್ದು ಹಳೇ ಕಾಟನ್ ಸೀರೆಗಳೇ. ಉಡಲಾಗದಷ್ಟು ಬಣ್ಣಗೆಟ್ಟರೂ ತೀರಾ ಹರಿದಿಲ್ಲದ ಸೀರೆ, ಜೊತೆಗೆ ಕೆಲವೊಮ್ಮೆ ಕಾಟನ್ ವೇಸ್ಟಿಗಳನ್ನೂ ಪದರು ಪದರಾಗಿ ಸೇರಿಸಿ, ಒಟ್ಟಾಗಿ ಹೊಲಿದು ‘ರಜಾಯಿ’ ಅಥವಾ ‘ಗೊದ್ದೊಡಿ’ ತಯಾರಿಸುತ್ತಿದ್ದರು, ಅಜ್ಜಿ ಮತ್ತು ಅಮ್ಮ. ಇಲ್ಲಿಯೂ, ಸಾಮಾನ್ಯವಾಗಿ ವೇಸ್ಟಿಗಳು ಒಳಪದರುಗಳಲ್ಲಿ ಬಿಳಿಯುಳಿಸಿಕೊಳ್ಳುತ್ತಿದ್ದರೆ ಇದ್ದುದರಲ್ಲಿ ಚಂದ ಬಣ್ಣದ ಸೀರೆಗಳು ಹೊರಪದರದಲ್ಲಿ ಕವಚವಾಗುತ್ತಿದ್ದವು. ಇವೇ ನಮ್ಮಗಳ ಹಾಸಿಗೆ (ಈಗಲೂ ನನ್ನ ಮನೆಯಲ್ಲಿ ಇಂಥ ಮೂರು ರಜಾಯಿಗಳಿವೆ). ಅದರ ಮೇಲೆ ಹಾಸಲು ಮತ್ತು ನಮ್ಮ ಮೇಲೆ ಹೊದೆಯಲೂ ಕೂಡಾ ಕೈಮಗ್ಗದ ಸೀರೆಯ ಪದರಗಳು. ಪುಟ್ಟ ಚಿಣ್ಣರಿಗೆ ಮೂರು ಮಡಿಕೆ, ತುಸು ದೊಡ್ಡವರಿಗೆ ಎರಡೇ ಮಡಿಕೆ. ಮಳೆಗಾಲ, ಛಳಿಗಾಲಗಳಲ್ಲಿ ಎರಡೆರಡು ಸೀರೆ (ಯಾ ವೇಸ್ಟಿ)ಗಳ ಲಕ್ಷುರಿ. ಈಗ ಎಂತೆಂಥ ದಪ್ಪನೆಯ ಮೆತ್ತನೆಯ ಬ್ಲ್ಯಾಂಕೆಟ್‌ಗಳು ಮಾರುಕಟ್ಟೆಯಲ್ಲಿ ದೊರಕಿದರೂ ಆ ಎರಡೆರಡು ಮಗ್ಗದ ಸೀರೆಗಳ ನಾಲ್ಕು ಪದರಗಳ ನಡುನಡುವೆ ಇಣುಕುತ್ತಿದ್ದ ಬಣ್ಣಬಣ್ಣದ ಕನಸುಗಳು ಕಾಣೆಯಾಗಿವೆ.

ಅಂಗಿಗಳ ಬೆಡಗು-ಬಿನ್ನಾಣ, ಒನಪು-ಓರಣ, ತರಾವರಿ ಲೋಕಪರಿಗಳನ್ನು ಗಮನಿಸಿದರೆ ಸೀರೆ ಸೀಮಿತವೇ ಸರಿ. ಏನಿದ್ದರೂ ಆರು ಮೀಟರ್ ಉದ್ದದ ಒಂದೂಕಾಲು ಮೀಟರ್ ಅಗಲದ ಬಟ್ಟೆ, ಅಷ್ಟೇ! ಆದರೂ ಅದರ ಕಾಂತತ್ವಕ್ಕೇನೂ ಕಡಿಮೆಯಿಲ್ಲ. ಭಾರತಕ್ಕೆ ಪ್ರವಾಸಿಗರಾಗಿ ಬರುವ ಎಷ್ಟೆಷ್ಟೋ ಪರದೇಶೀಯರಲ್ಲಿ ಕೆಲವರಾದರೂ ಸೀರೆಯ ವಿಧವಿಧ ವಿನ್ಯಾಸಗಳಿಗೆ ಮೆರುಗಿನ ಲಾವಣ್ಯಕ್ಕೆ ಮಾರುಹೋಗದೆ ಇಲ್ಲ. ಸೀರೆ ಕೊಂಡು, ಕುಪ್ಪಸ ಹೊಲಿಸಿಕೊಂಡು, ಸೀರೆ ಉಡುವುದನ್ನು ಕಲಿತು, ವೈಯಾರ ಮಾಡುವುದನ್ನೂ ಬೆಡಗಚ್ಚರಿಯಿಂದ ಖುಷಿ ಪಡುವುದನ್ನೂ ಕಂಡಿದ್ದೇನೆ. ಸೀರೆಯ ಖ್ಯಾತಿಗೆ ಇದೇ ಪುರಾವೆ. ನಾವುಗಳು ಪರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಬಟ್ಟೆಯನ್ನು ಕೊಳ್ಳುವುದಿಲ್ಲವೆ? ಅಂತ ಕೇಳಬೇಡಿ. ಪ್ರವಾಸಾರ್ಥಿಯಾಗಿ ಜಪಾನಿಗೆ ಹೋಗಿ ಕಿಮೋನೋ ಕೊಂಡವರೆಷ್ಟು ಜನ? ಆರು ತಿಂಗಳ ವಿಸಿಟಿಂಗ್ ವೀಸಾದಲ್ಲಿ ಅಮೆರಿಕಕ್ಕೆ ಬಂದವರೆಷ್ಟು ಮಂದಿ ಅಲ್ಲಿನ ಸ್ಟೇಪಲ್ ಡ್ರೆಸ್- ೩-ಪೀಸ್-ಸೂಟ್ (ಸ್ಕರ್ಟ್ ಅಥವಾ ಪ್ಯಾಂಟ್ ಜೋಡಿ) ಕೊಂಡುಬಂದಿದ್ದಾರೆ? ಪರದೇಶದಲ್ಲೇ ಕೆಲವಾರು ಸಮಯ ಬಾಳುವ ಹಾಗಿದ್ದರೆ, ‘ಬಿ ಅ ರೋಮನ್ ವೆನ್ ಇನ್ ರೋಮ್’ ಅನ್ನುವ ಮಾತಿನಂತೆ ಅಲ್ಲಿಯ ರೀತಿನೀತಿಯ ಬಟ್ಟೆ ಧರಿಸುವತ್ತ ಮನಸು ಮಾಡುವುದೇನೂ ವಿಶೇಷವಲ್ಲ. ನಾವೆಲ್ಲರೂ ಅದನ್ನು ಮಾಡಿದವರೇ. ಆದರೂ, ನಮ್ಮೆಲ್ಲರ ಮನದೊಳಗೆ ಸೀರೆಗೊಂದು ಪ್ರತ್ಯೇಕ ಪೀಠ ಇದೆ ತಾನೆ? ‘ವೆರಿ ಸ್ಪೆಷಲ್ ಒಕೇಷನ್’ ಅಂತಂದಾಗ ಸೀರೆಯನ್ನೇ ಆಪ್ತವಾಗಿ ಎತ್ತಿಕೊಂಡು ಎದೆಗಪ್ಪಿಕೊಳ್ಳುವವರಲ್ಲವೆ ನಾವು? ಅಂಥ ವಿಶೇಷ ಸಿಂಹಾಸನ ಬೇರಾವುದೇ ‘ಅಂಗಿ’ಗೆ ಕೊಟ್ಟಿದ್ದೇವಾ? ಸಲ್ವಾರ್ ಅದರ ಹತ್ತಿರದಲ್ಲಿದ್ದರೂ ಸೀರೆಯ ಸ್ಥಾನ ಸೀರೆಯದ್ದೇ, ಹೌದಲ್ಲ!

ಸೀರೆಯಲ್ಲದಿದ್ದರೆ ಕಳ್ಳ ಕೃಷ್ಣನೂ ಒಂದು ರೀತಿಯಲ್ಲಿ ಕಳ್ಳನೆನಿಸಿಕೊಳ್ಳುತ್ತಿರಲಿಲ್ಲ. ಸೀರೆಗಳ ಜೊತೆಗೆ ಹೃದಯಗಳನ್ನೂ ಕದಿಯುತ್ತಿರಲಿಲ್ಲ. ‘ನಾರಿಯಾ ಸೀರೆ ಕದ್ದ, ರಾಧೆಯಾ ಮನವಾ ಗೆದ್ದ, ಕಳ್ಳರ ಕಳ್ಳ ಕೃಷ್ಣನೂ ಬಂದಾ...’ ಅನ್ನುವ ಮೋಹಕ ಮೋಡಿಯ ಹಾಡೂ ಹುಟ್ಟುತ್ತಿರಲಿಲ್ಲ. ಸೀರೆಯಿಲ್ಲದಿರುತ್ತಿದ್ದರೆ ಮಹಾಭಾರತವೇ ಆಗುತ್ತಿರಲಿಲ್ಲ ಎನ್ನುತ್ತೇನೆ; ನಳ-ದಮಯಂತಿಯ ಕಥೆಗೂ ತಿರುವು ಇರುತ್ತಿರಲಿಲ್ಲ ಅಂತನೂ ಹೇಳಬಹುದು. ಅಂತಹ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದಕ್ಕಿದೆ. ಸೀರೆ ಉಡುವ ರೀತಿಗಳು ಕಾಲಾಂತರದಲ್ಲಿ ಬದಲಾಗಿದ್ದರೂ ವೇದಕಾಲದಿಂದಲೂ ಹಾಸಿ ಬಂದ ಸೀರೆ ಇಂದಿಗೂ ಸೀರೆಯಾಗಿಯೇ ಉಳಿದಿರುವುದು ಆ ಬಟ್ಟೆಯ ಪ್ರಾಮುಖ್ಯವನ್ನು ಸಾರುತ್ತದೆ. ಅದಕ್ಕೇ ನಾನನ್ನುವುದು, ಸೀರೆಯ ನೆರಿಗೆಗಳಲ್ಲಿ ನಮ್ಮ ಹೃದಯಗಳಿವೆ. ಸೆರಗಿನ ಬೀಸಾಟದಲ್ಲಿ ನೂರಾರು ಕಥೆಗಳಿವೆ. ಸೆರಗಿನ ಜೋಳಿಗೆಯಲ್ಲಿ ಸಾವಿರಾರು ಕನಸುಗಳಿವೆ. ಸೆರಗಿನ ಬೆಚ್ಚನೆಯಲ್ಲಿ ಅಸಂಖ್ಯ ಭಾವಗಳಿವೆ. ಸೀರೆ ಸೀರೆಯೇ.

ಇಷ್ಟೆಲ್ಲ ಹೇಳಿದ ಮೇಲೆ ನಾನು ಸೀರೆಯ ಪಕ್ಷಪಾತಿ ಅಂತ ನಿಮಗನ್ನಿಸಿದ್ದರೆ ಅದು ನಿಮ್ಮ ತಪ್ಪೇನಲ್ಲ, ಬಿಡಿ. ‘ಬೀಯಿಂಗ್ ಡೆವಿಲ್ಸ್ ಅಡ್ವೋಕೇಟ್’ ಅಂತ, ಇತ್ತ ಕಡೆಗೂ ಕೆಲವು ಮಾತು ಸೇರಿಸಲೇಬೇಕಾಗುತ್ತದೆ. ಮೊದಲನೇದಾಗಿ, ಇಪ್ಪತ್ತು ವರ್ಷಗಳ ಹಿಂದೆ, ನನ್ನ ಇನ್ನೊಬ್ಬ ಗೆಳತಿಯ ಎರಡು ವರ್ಷದ ಮಗ ಹೇಳಿದ ಮಾತೊಂದನ್ನು ಇಲ್ಲಿ ತಂದಿಡಬೇಕು. ಆದಿನ ಅವರೆಲ್ಲ, ಯಾವುದೋ ಸಮಾರಂಭಕ್ಕೆ ಹೊರಡಬೇಕಾಗಿತ್ತು. ಇವಳು ಪತಿದೇವರಲ್ಲಿ ಪ್ರಶ್ನೆಯಿಟ್ಟಳು: "ರೀ... ಆ ಪಾರ್ಟಿಗೆ ಹೋಗ್ಲಿಕ್ಕೆ ಸೀರೆ ಉಡ್ಬೇಕಾ, ಸಲ್ವಾರ್ ಹಾಕ್ಬೇಕಾ?"
ಅಲ್ಲೇ ಇದ್ದ ಮಗರಾಯ ತಕ್ಷಣ ಅವನದೇ ತೊದಲು ಮುದ್ದಿನಲ್ಲಿ ಹೇಳಿದನಂತೆ, "ಸೀರೆ ಬೇಡಮ್ಮ, ಹೊಟ್ಟೆ ಕಾಣ್ತದೆ. ಸಲ್ವಾರ್ ಹಾಕು."
ಆಕ್ಷಣದ ಬೆರಗನ್ನು ಇಪ್ಪತ್ತು ವರ್ಷಗಳಿಂದಲೂ ಹಾಗೇ ಉಳಿಸಿಕೊಂಡು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅವಳಿಗೆ ಇತ್ತೀಚೆಗೆ ಹೇಳಿದ್ದೆ, "ಪರವಾಗಿಲ್ಲ ಬಿಡು, ಒಳ್ಳೇ ಸೆನ್ಸಿಬಲ್ ಮಗ. ಅವನ ಹೆಂಡತಿಯನ್ನು ತುಂಬಾ ತುಂಬಾ ಜೋಪಾನ ಮಾಡಿ ನೋಡ್ಕೊಳ್ತಾನೆ."
ಇನ್ನೊಮ್ಮೆ ದಂಗಾಗಿ ಉತ್ತರಿಸಿದ್ದಳು, "ಅಯ್ಯೋ! ಇದನ್ನು ನಾನು ಯೋಚಿಸಲಿಲ್ಲ ಅಂದ್ಕೊಂಡಿದ್ಯಾ? ಅಷ್ಟೆಲ್ಲ ಜೋಪಾನ ಮಾಡುವ ಸೆನ್ಸಿಬಿಲಿಟಿ ಬೇಡ. ಅವ್ನು ನಾರ್ಮಲ್ ಆಗಿದ್ದರೆ ಸಾಕು ಮಾರಾಯ್ತಿ."
"ಸೊಸೆಯ ಬಗ್ಗೆ ಈಗಲೇ ಜೆಲಸ್ಸಾ?"
"ಅಲ್ಲಪ್ಪಾ, ಅಲ್ಲ. ಇವ್ನು ಅಷ್ಟೊಂದು ಜೋಪಾನ ಮಾಡ್ತಾ ಇದ್ರೆ ಅವಳು ಇವನ ಜೊತೆ ಸಂಸಾರ ಮಾಡುವ ಬದಲು ಬಿಟ್ಟೇ ಹೋದಾಳು ಅನ್ನುವ ಭಯ." ಅಂದಳು.
ನಿಜ ತಾನೇ! ಸೋಲೊಪ್ಪಿಕೊಳ್ಳುವಂತೆ ಸುಮ್ಮನಾದೆ. ಸೀರೆಯ ಬಗ್ಗೆ ಆ ವಯಸ್ಸಲ್ಲಿ ಆ ಪುಟ್ರಾಯನ ವ್ಯೂವ್ ಮೆಚ್ಚುಗೆ ಆಯ್ತಾದರೂ ಬೆಳೆದು ನಿಂತ ಅವನನ್ನು ನಾನು ಈ ಬಗ್ಗೆ ಮಾತಾಡಿಸಿಲ್ಲ. ಈಗಂತೂ ಆಸ್ಟ್ರೇಲಿಯಾದಲ್ಲಿ ಎಂ.ಎಸ್. ಮಾಡುತ್ತಿರುವ ಹುಡುಗ, ಡೇಟಿಂಗ್ ಅಂತ ಹೊರಗೆ ಇಣುಕುತ್ತಿರುವ ಹುಡುಗ (ಹಾಗಂತ ಇವಳೇ ನನಗೆ ಹೇಳಿದ್ದು). ಸೀರೆಯ ನಾರಿಯನ್ನು ಮೆಚ್ಚುತ್ತಾನೋ ಅಂಗಿಯ ಬೆಡಗಿಯನ್ನು ಒಪ್ಪುತ್ತಾನೋ ಕಾದು ನೋಡಬೇಕು (ಆ ಕಾಂಗರೂ ನಾಡಲ್ಲಿ ಅವನ ಗ-ಮನ ಸೆಳೆಯುವಾಕೆ ಯಾರೋ!).

ಇನ್ನು ಎರಡನೇ ವಾದ, ಸೀರೆಯನ್ನು ಈಗೀಗ ನಮ್ಮ ಸಿನೆಮಾ ತಾರೆಯರು ಶೋಕೇಸಿಸುವ ರೀತಿ. ಇದು ಮಾತ್ರ ತೀರಾ ಖೇದದ ಸಂಗತಿ. ಗಾಂಭೀರ್ಯದೊಂದಿಗೆ ಗೌರವ ತರಬಲ್ಲ ಬಟ್ಟೆಯನ್ನು ವ್ಯತಿರಿಕ್ತವಾಗಿ ಬಿಂಬಿಸುವ ಅವರ ಫ್ಯಾಷನ್ ಸೆನ್ಸ್ ನನಗರ್ಥವಾಗದು. ಹಾಗೇನೇ, ಮೂರನೇ ಮಾತು ವಿಷಾದದ ವಿಷಯ; ಇಷ್ಟು ಆಪ್ತವಾಗುವ ಸೀರೆಯನ್ನೇ ಹಲವು ಹೆಣ್ಣುಮಕ್ಕಳು ಆತ್ಮಹತ್ಯೆಗೆ ಸಾಧನವಾಗಿ ಬಳಸಿಕೊಂಡಿರುವುದು. ಮಾನ ಮುಚ್ಚುವ ಬಟ್ಟೆ ಜೀವ ಹೀರುವ ದಾರಿಯಾಗುವುದು ಎಂಥ ವಿಪರ್ಯಾಸ! ಅವರೆಲ್ಲ ಸೀರೆಯಲ್ಲದೆ (ದುಪ್ಪಟ್ಟಾ ಅಥವಾ ಶಾಲ್ ಇಲ್ಲದ) ಬೇರಾವುದೇ ರೀತಿಯ ಅಂಗಿಯನ್ನು ತೊಟ್ಟಿದ್ದಿದ್ದರೆ ಅವರ ಆ ಅತ್ಯಂತ ದುರ್ಬಲ ಮನೋಸ್ಥಿತಿಯ ಕ್ಷಣದಲ್ಲಿ ಕೂಡಲೇ ಕೈಗೆ ಯಾವುದೂ ಸಿಗದೇ ಹೋಗಿ, ಅವರು (ಕೆಲವರಾದರೂ) ಬದುಕುಳಿಯುವ ಸಾಧ್ಯತೆ ಇತ್ತೆನ್ನುವುದು ಈಗ ತರ್ಕ ಮಾತ್ರ ಅಂತನ್ನಿಸಬಹುದು.

ಸೀರೆ-ಅಂಗಿ ವ್ಯಾಖ್ಯಾನದಲ್ಲಿ ಯಾವುದೇ ಒಂದು ಕಡೆಗೆ ವಾಲಿಕೊಳ್ಳುವುದು ಕಷ್ಟವೇ. ನಿಜ, ರಪ್ಪಂತ ಹೊರಟು ರೆಡಿಯಾಗಲು ಕೆಲವಾರು ಅಂಗಿಗಳೇ ಅನುಕೂಲವಾದರೂ, ವಿಶೇಷವಾಗಿ ಸಜ್ಜಾಗಲು ಸೀರೆಯೇ ಬೇಕು. ಪ್ರಯಾಣದ ಸಂದರ್ಭಗಳಿಗೆ ಜೀನ್ಸ್ ಟಾಪ್ ಸೂಟೆಬಲ್ ಆದರೆ, ಶುಭ ಸಮಾರಂಭಗಳಲ್ಲಿ ರೇಶ್ಮೆ ಸೀರೆಗಳ ಸರಭರ ಇಲ್ಲದಿದ್ದರೆ ಆದೀತೆ? ಅಮ್ಮನ ರೇಶ್ಮೆ ಸೀರೆಯ ಹೊಸ ರೂಪದಲ್ಲಿ ಗೊಂಬೆಯಾಗುವ ಪುಟ್ಟಮ್ಮನ ಪಟ್ಟೆಲಂಗದ ಸೊಬಗು ಎಂಥಾ ಶಿಫಾನ್ ಸ್ಯಾಟಿನ್ ಫ್ರಾಕಿಗೂ ಇರದು ಎಂದರೆ ನೀವೆಲ್ಲ ನನ್ನನ್ನು ಅಟ್ಟಿಸಿಕೊಂಡು ಬರೋದಿಲ್ಲವಲ್ಲ. ಇಗೋ, ನಾ ಹೊರಟೆ... ಹೊಸದೊಂದು ನೆಪದಲ್ಲಿ ಇನ್ನೊಂದು ಹೊಸದನ್ನು ಹುಡುಕಲು; ಸೀರೆಯೊಂದು ಬೇಕಾಗಿದೆ, ಮದುಮಗಳಿಗೆ ಉಡುಗೊರೆ ಕೊಡಲು.

Sunday 11 May, 2014

ಅಮ್ಮ ಸಂಕಟ

ಯಾರು ಮಂತ್ರ ಮಾಡಿದರೋ ರಂಗ ಅಳುತಿರುವ
ಯಾರ ಕಣ್ಣು ನಾಟಿದೆಯೋ ಕೃಷ್ಣ ಕನಲಿರುವ
ಯಾವ ಗಾಳಿ ಸೋಕಿತೇನೊ ಚೆನ್ನ ಬೆಂದಿರುವ
ಯಾಕೆ ಹೀಗೆ ಮನವ ಹಿಂಡಿ ಚೆಲುವ ನೊಂದಿರುವ

ಏನ ತಿನ್ನಲಿಕ್ಕಿದರೋ ಗೋಪಕನ್ನೆಯರು
ಎಲ್ಲಿ ಆಟಕೆಳೆದಿಹರೋ ಗೊಲ್ಲಬಾಲರು
ಎಂಥ ಮರದ ಕೆಳಗೆ ಓಡಿಯೋಡಿಬಂದನೋ
ಏಳಲೊಲ್ಲ ಮುದ್ದುಮಲ್ಲ, ನಲುಗಿ ಕೊರಗುವ

ಏನ ಕಂಡು ಬೆದರಿ ಬಂದು ನಡುಗುತಿರುವನೋ
ಎಲ್ಲಿ ನಗುವ ಕಳೆದುಕೊಂಡು ಮುದುರುತಿರುವನೋ
ಎಂಥ ಹೊಳೆಯ ಸುಳಿಯ ಒಳಗೆ ಸೆಳೆಗೆ ಸಿಲುಕಿದ
ಏರುತಿಹುದು ತಾಪ, ರವಿಯೆ ಹಣೆಯಲಿಳಿದನೋ

ಕಾಡಿಬೇಡಿ ಬೆಣ್ಣೆ ಮೊಸರು ಕೇಳುತಿದ್ದವ
ಕಾಣದಂತೆ ಕಣ್ಣ ಹಿಂದೆ ಕದ್ದು ಮೆದ್ದವ
ನೋಡು ಈಗ, ಬೇಡವೆಂದು ಮೊಗವ ತಿರುವಿದ
ನೋಟವೆಲ್ಲೊ, ಮುರಳಿಯೆಲ್ಲೊ, ಮನವ ಕಳೆದವ

ಅಣ್ಣರಾಮ ಹೇಳಿದಂಥ ಮಾತು ಸತ್ಯವೆ?
ಬಣ್ಣ ಎರಚಿ ಮಾಯಗಾತಿ ಮರುಳು ಗೈದಳೆ?
ಮೋಹನಾಂಗ ನನ್ನ ಕುವರ ಅವಳ ಒಲಿದನೆ?
ಮೋಹದಲ್ಲಿ ಮುಳುಗಿ ಮರೆತು ಮೋದ ತೊರೆದನೆ?
(೨೪-ಎಪ್ರಿಲ್-೨೦೧೪)

Tuesday 18 March, 2014

ಮತ್ತೆ ದ್ರೌಪದಿ...

 ಹಿಮಾಗ್ನಿ

ಧರ್ಮಧ್ಯಾನಕೆ ನೀನು ಪದರಶಾಂತಿಯ ಧರಣಿ
ಇಂಗದ ಹಸಿವಿಗೆ ಪರಿಪೂರ್ಣಮಾತೆ
ರಸಿಕನಾಲಂಬನಕೆ ಶೃಂಗಾರ ರಂಭೆಯೇ
ಸೌಂದರ್ಯಮೂರ್ತಿಗೆ ಸದ್ರೂಪಲಕ್ಷ್ಮಿ
ಬಲುರಾಜತಂತ್ರಿಗೆ ಸೂಕ್ತಮಂತ್ರಿಯ ನೆರಳು
ಸಾಮ್ರಾಜ್ಯ ಛತ್ರದ ಅಭಿಷಿಕ್ತ ದಾಸಿ  

ನೀತಿಸಂಹಿತೆಗಳಿಗೆ ಭೂಮಿಕೆಯು ನೀನಾದೆ
ವಾಯುವೇಗಕೆ ಇತ್ತೆ ಮತ್ತೆ ಉತ್ಕರ್ಷ
ಶೌರ್ಯೋತ್ತುಂಗಕ್ಕೆ ಸ್ವಯಂ ಬಹುಮಾನ
ಆತ್ಮಗೌರವಕಾದೆ ಸೆಳೆವಶ್ವಶಕ್ತಿ
ಅಸಮ ಬುದ್ಧಿಯ ಬಲಕೆ ಪುಷ್ಠಿ ಸುರಭಿಯು ನೀನು
ಕರ್ಷಣಾಕೇಂದ್ರವೇ ನೀನಂತರ್ಬಿಂದು

ಋಜುಮಾರ್ಗ ಸತ್ವಕ್ಕೆ ನಿಜಬಟ್ಟೆಯಾಗಿದ್ದೆ
ಮಿಡಿಯುವೆದೆಯೊಳಗಿನ ತಿದಿಯೊತ್ತು ನೀನೇ
ಲೋಕೈಕ ಬಿಂಕಕ್ಕೆ ಕಡಿವಾಣದಂಕುಶವು
ಚತುರಚಿತ್ತದಸುತ್ತ ದಿವ್ಯಚೇತನವು
ಸುಕುಮಾರಸಹನೆಗೆ ಚಪ್ಪರದ ಮಲ್ಲಿಗೆಯು
ಪಂಚತತ್ವದ ಸುತ್ತ ಪ್ರಭೆಯ ದಿವ್ಯಾಗ್ನಿ

"ಷಟ್ಕರ್ಮಯುಕ್ತಾ ಕುಲಧರ್ಮಪತ್ನೀ"
ನೀನಾದೆ ಈ ಆರು ಗುಣಕೊಂದೆ ನಿಕಷ
ಧರ್ಮಪತ್ನಿಯ ಪಟ್ಟ ಚೌಕಟ್ಟು ನೆಲೆಯಿತ್ತು
ಕಟ್ಟಿದರು ನಿನ್ನೊಳಗ ಅಗ್ನಿಕನ್ನೆಯನು
ಮೆಟ್ಟದೆಯೆ ಕೊಚ್ಚದೆಯೆ ನಿನ್ನ ರೊಚ್ಚಿನ ಸಿರಿಯ
ಒರೆಗಿರಿಸಿ ದಮನಿಸಿದೆ ಕುಲಾಂತಶತಕ

ಸಾಹಸದ ಗಾಥೆಯಲಿ ನಿನಗೆಲ್ಲಿ ಸಂಗಾತ
ಅಂಗಾತ ಒರಗಿದರು ತನುಜಾತರೆಲ್ಲ
ಸಹಿಸುತ್ತ ದಹಿಸುವಿಕೆ ದಹಿಸುತ್ತ ಸಹಿಸುವಿಕೆ
ಬಿರುಗಾಳಿಗೊಡ್ಡಿದ್ದೆ ಸಿರಿತುರುಬುಸೆರಗ
ಐಮನೆಯ ಥರಥರದ ನಿಯಮಪರದೆಗಳೊಳಗೆ
ಸ್ವಂತಿಕೆಯ ಸಹಿಬರೆದ ಹಿಮಾಗ್ನಿರಮಣಿ
*ಸುಪ್ತದೀಪ್ತಿ
[(೧೦-೨೧)-ಫೆಬ್ರವರಿ-೨೦೧೪]

Tuesday 14 January, 2014

ಕಿಚ್ಚು-ಸಾಗರ

ಹುಟ್ಟಿದ್ದೇ ಹೆಣ್ಣಾಗಿ, ಸೇಡಿನ ಕಣ್ಣಾಗಿ
ಮೈಯೆಲ್ಲ ಬೆಂಕಿಯುರಿ, ಅಗ್ನಿಕನ್ಯೆ;
ತಂದೆ ಪಾಲನೆಗಿಂತ ತಾಯ್ಗರುಳು ಏರದಿರೆ
ಬೆಳೆದದ್ದು ಧೀರತ್ವ ಧೀಮಂತಿಕೆ
 
ಅರಳಿದೆ ಹೆಣ್ಣಾಗಿ, ರೂಪಕ್ಕೆ ಕಣ್ಣಾಗಿ
ಸ್ವಯಂವರ ಸೊಬಗಲ್ಲಿ ಪಾರಿತೋಷ;
ಮನದೊಳಗೆ ಒಂದಾಸೆ, ತಂದೆ-ಮಗಳಿಬ್ಬರಿಗೆ
ಗೆಲಬೇಕು ಜಗದೇಕವೀರ ಪಾರ್ಥ
 
ಬಯಕೆಯೇ ಗೆದ್ದರೂ ವರಿಸಿದ್ದು ಐವರನು
ತಾನೇ ದಾಳವೋ? ಲಾಳಿ ತಾನಾದೆಯ?
ಒಬ್ಬೊಬ್ಬ ಪತಿರಾಯ ಒಂದೊಂದು ಮರ್ಮದವ
ವರುಷವೊಂದರ ಚಕ್ರನಿಯಮ ನಿನಗೆ
 
ಇಂದು ಇನಿಯನು ಒಬ್ಬ ನಾಳೆಗವ ಪರಕೀಯ
ಕಣ್ಮನವ ಹೊರಳಿಸದೆ ನಡೆಯಬೇಕು;
ಭಾವನೋ ಮೈದುನನೋ, ನಾಲ್ಕುವರ್ಷದ ದೀಕ್ಷೆ
ಸಲುಗೆಯಾಚೆಗೆ ಮಾತು ಸವೆಯಬೇಕು
 
ಸತ್ಯ-ಧರ್ಮಕ್ಕೆ ಮನಸ ಕಟ್ಟಿಕೊಟ್ಟವನೊಬ್ಬ
ಮಗದೊಬ್ಬ ಶೌರ್ಯವೇ ಮೈವೆತ್ತವ;
ಇನ್ನೊಬ್ಬ ರಸಿಕತೆಗೆ ರಾಜಮಾರ್ಗದಿ ನಡೆದ
ಯಮಳರೋ ಸೌಂದರ್ಯಮೂರ್ತರೂಪಿಗಳು
 
ಒಂದೊಂದು ವ್ಯಕ್ತಿತ್ವ ಒಂದೊಂದು ವರುಷಕ್ಕೆ
ಹೊಂದಿಕೊಳ್ಳುವ ಹೊತ್ತು ಎತ್ತಂಗಡಿ;
ಐದು ಭಾವಗಳಲ್ಲಿ ಹಂಚಿಹರಿದುದು ಪ್ರೀತಿ
ಹೊತ್ತುಹೆತ್ತಿಹ ಸಮಯ ಏಕಾಂತವೆ?
 
ಐದು ಅಂತಃಪುರದ ಅರಸಿಯಾಗಿದ್ದವಳೆ
ನಿನ್ನ ಸ್ವಂತಕ್ಕೇನು ಒದಗಿ ಬಂದಿತ್ತು?
ರಾಜಸೂಯದ ಸ್ನಾನವೇಕೆ ಮುಳುವಾಯಿತು?
ಸಾಮ್ರಾಜ್ಞಿ ಶ್ರೀಮುಡಿಗೂ ಕೈ-ನೆಟ್ಟಿತು
 
ಅಂತಿಂಥ ಪಾಡಲ್ಲ ಪಾಂಚಾಲಿ ನಿನ್ನದು
ಅದಕೇ ಜಗದಗಲ ನಿನ್ನ ಕೀರ್ತಿ;
ಅಂಥ ಬಾವುಟದಡಿಯ ನೆರಳಿನಾಸರೆ ಬೇಕು
ನಿನ್ನೈದು ಪತಿಗಳ ಒಗ್ಗಟ್ಟಿಗೆ;
 
ಹೆತ್ತ ಮಕ್ಕಳ ರಕ್ತ-ಸಿಕ್ತ ಸಿಂಹಾಸನದಿ
ಮತ್ತೆ ರಾಜ್ಯವನಾಳ್ದ ಧೀರರವರು;
ಒಮ್ಮೆಯಾದರೂ ನಿನ್ನ ಕಣ್ಣ ಸಾಗರಕಿಳಿದ
ಸಾಹಸಿಗರವರೇನು, ಹೇಳು ನೀನೆ?
 
ಹೆಣ್ಣಲ್ಲವೇ ನೀನು, ಭಾರತಿಯ ಹಣೆಗಣ್ಣು
ಕುರುಸಭೆಗೆ ಕರೆಸಿದ್ದೆ ಕೃಷ್ಣಾನುಕಂಪ;
ಇಂದು ಒಬ್ಬೊಬ್ಬಳಿಗೂ ಆತ್ಮಬಲ ಛಾತಿಕೊಡು
ದಮನಿಸಲು ಕೀಚಕ-ದುಶ್ಶಾಸನ ಪಡೆ
************
(೦೮-ಜನವರಿ-೨೦೧೪ (೨))

ಓದುಗರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು- ಹೊಸ ಕವನದೊಸಗೆಯೊಂದಿಗೆ.

ಇದನ್ನು ಬರೆಯುವ ಮೊದಲು ಇದೇ ವಿಷಯಾಧಾರಿತ ಕವನವೊಂದನ್ನು ಬರೆದೆ. ಅದು ಈ ಕೊಂಡಿಯಲ್ಲಿದೆ. ಅದನ್ನೂ ಓದಿ, ಅಭಿಪ್ರಾಯ ತಿಳಿಸಿ.